ಥಾಯ್ ದ್ವೀಪದಲ್ಲಿ ಪರಿತ್ಯಕ್ತ ರೀತಿಯಲ್ಲಿ 5 ಮಕ್ಕಳ ಸಹಿತ 59 ರೊಹಿಂಗ್ಯಾಗಳು ಪತ್ತೆ: ವರದಿ
IMAGE SOURCE:AP
ಬ್ಯಾಂಕಾಕ್, ಜೂ.5: ಥಾಯ್ ದ್ವೀಪದಲ್ಲಿ 59 ರೊಹಿಂಗ್ಯಾಗಳು ಪರಿತ್ಯಕ್ತ ರೀತಿಯಲ್ಲಿ ಪತ್ತೆಯಾಗಿದ್ದು, ಮಲೇಶ್ಯಾಕ್ಕೆ ಹೋಗುವ ದಾರಿಯಲ್ಲಿ ಕಳ್ಳಸಾಗಣೆದಾರರು ತಮ್ಮನ್ನು ಇಲ್ಲಿ ಬಿಟ್ಟುಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
5 ಮಕ್ಕಳಿದ್ದ ಈ ತಂಡವು ದಕ್ಷಿಣದ ಸ್ಯಾಟನ್ ಪ್ರಾಂತದ ಕೋಹ್ಡೊಂಗ್ ದ್ವೀಪದಲ್ಲಿ ಶನಿವಾರ ಪತ್ತೆಯಾಗಿದೆ. ಇವರ ವಿರುದ್ಧ ಅಕ್ರಮ ಪ್ರವೇಶ ಪ್ರಕರಣ ದಾಖಲಿಸಿಕೊಂಡಿದ್ದು ಮ್ಯಾನ್ಮಾರ್ಗೆ ಗಡೀಪಾರು ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ತಂಡಕ್ಕೆ ಮಾನವೀಯ ನೆರವು ಒದಗಿಸಿದ್ದು, ಇವರು ಮಾನವ ಕಳ್ಳಸಾಗಣೆಯ ಬಲಿಪಶುಗಳೇ ಎಂಬುದನ್ನು ತನಿಖೆ ನಡೆಸಲಾಗುವುದು . ಇವರು 3ರಿಂದ 5 ದಿನ ಉಪವಾಸವಿರುವಂತೆ ಕಾಣುತ್ತಿದೆ ಎಂದು ಲೆಫ್ಟಿನೆಂಟ್ ಜನರಲ್ ಸುರಚೆತ್ ಹಕ್ಪಾನ್ ಹೇಳಿದ್ದಾರೆ.
ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ 3 ನೌಕೆಗಳ ಮೂಲಕ ಒಟ್ಟು 178 ಮಂದಿ ಹೊರಟಿದ್ದು ಪ್ರತಿಯೊಬ್ಬರೂ ತಲಾ 1,300 ಡಾಲರ್ ಶುಲ್ಕ ಪಾವತಿಸಿದ್ದೇವೆ. ಎರಡು ದೋಣಿಗಳನ್ನು ಮಲೇಶ್ಯಾದ ಅಧಿಕಾರಿಗಳು ತಡೆದು ಅದರಲ್ಲಿದ್ದ 119 ಮಂದಿಯನ್ನು ಬಂಧಿಸಿದ್ದಾರೆ . ಆದ್ದರಿಂದ 3ನೇ ದೋಣಿಯಲ್ಲಿದ್ದ ತಮ್ಮನ್ನು ಕೋಹ್ಡೋಂಗ್ ದ್ವೀಪದಲ್ಲಿ ಬಿಟ್ಟುಹೋಗಿದ್ದಾರೆ ಎಂದು ತಂಡದ ಸದಸ್ಯರು ಹೇಳಿರುವುದಾಗಿ ವರದಿಯಾಗಿದೆ.