ಬಾಹ್ಯಾಕಾಶ ನಿಲ್ದಾಣ ಪೂರ್ಣಗೊಳಿಸಲು ಸಿಬ್ಬಂದಿ ರವಾನಿಸಿದ ಚೀನಾ
PHOTO SOURCE: AFP
ಬೀಜಿಂಗ್, ಜೂ.5: ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ಚೀನಾ ರವಿವಾರ 3 ಗಗನಯಾತ್ರಿಗಳನ್ನು 6 ತಿಂಗಳ ದೀರ್ಘ ಕಾರ್ಯಯೋಜನೆಗಾಗಿ ಬಾಹ್ಯಾಕಾಶಕ್ಕೆ ರವಾನಿಸಿದೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.
ವಾಯವ್ಯ ಚೀನಾದ ಗೋಬಿ ಮರುಭೂಮಿಯಲ್ಲಿನ ಜಿಯುಖ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಅಂತರಿಕ್ಷಕ್ಕೆ ಚಿಮ್ಮಿದ ಮಾರ್ಚ್-25 ರಾಕೆಟ್ ತನ್ನೊಂದಿಗೆ ಶೆನ್ರೌ-14 ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ಯುವ ಪ್ರಕ್ರಿಯೆಯನ್ನು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ನೇರ ಪ್ರಸಾರ ಮಾಡಿದೆ.
ಶೆನ್ರೌ-15 ನೌಕೆಯನ್ನು ಅಂತರಿಕ್ಷದಲ್ಲಿ ನೆಲೆಗೊಳಿಸಿದ ಬಳಿಕ ಅದರ ಮೂವರು ಸಿಬಂದಿ ಚೀನಾದ ಟಿಯಾಂಗಾಂಗ್ ನಿಲ್ದಾಣದಲ್ಲಿ 6 ತಿಂಗಳು ವಾಸಿಸಲಿದ್ದು ಈ ಅವಧಿಯಲ್ಲಿ 2 ಹೆಚ್ಚುವರಿ ಲ್ಯಾಬೊರೆಟರಿ ಮೊಡ್ಯೂಲ್ಗಳನ್ನು ನಿಲ್ದಾಣದ ಮುಖ್ಯ ವಾಸಸ್ಥಾನಕ್ಕೆ ಸೇರಿಸಲಾಗುವುದು. ಕಮಾಂಡರ್ ಚೆನ್ ಡಾಂಗ್ ನೇತೃತ್ವದ ತಂಡದಲ್ಲಿ ಲಿಯು ಯಾಂಗ್ ಮತ್ತು ಕಾಯ್ ಕ್ಸುಚೆ ಸದಸ್ಯರಾಗಿದ್ದು ಸುಮಾರು 180 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಿದ ಬಳಿಕ ಡಿಸೆಂಬರ್ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ. ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿರುವ ಬಾಹ್ಯಾಕಾಶ ನಿಲ್ದಾಣವು ಚೀನಾದ 3 ದಶಕಗಳ ಸುದೀರ್ಘ ಬಾಹ್ಯಾಕಾಶ ಯೋಜನೆಯ ಒಂದು ಮೈಲುಗಲ್ಲಾಗಿ ಗುರುತಿಸಿಕೊಳ್ಳಲಿದೆ.
ಶೆನ್ರೌ-14 ಕಾರ್ಯಯೋಜನೆ ಚೀನಾದ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಹಂತದ ಪ್ರಮುಖ ಕಾರ್ಯವಾಗಿದ್ದು ಈ ಕಾರ್ಯ ಅತ್ಯಂತ ಕಠಿಣ ಮತ್ತು ಸವಾಲಿನದ್ದಾಗಿದೆ ಎಂದು ಚೆನ್ ಡಾಂಗ್ ಶನಿವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದರು.