ಕೆಐಒಸಿಎಲ್ ಪೆಲೆಟ್ ಮಾರಾಟದ ಶೇ.45 ತೆರಿಗೆ ಹಿಂಪಡೆಯಲು ಯು.ಟಿ.ಖಾದರ್ ಒತ್ತಾಯ

ಮಂಗಳೂರು, ಜೂ. 6: ಸರಕಾರದ ಅಧೀನದ ಕೆಐಒಸಿಎಲ್ ನ ಪೆಲೆಟ್ ಮಾರಾಟದ ಮೇಲೆ ಶೇ. 45 ತೆರಿಗೆ ವಿಧಿಸುವ ಮೂಲಕ ಅದನ್ನು ನಷ್ಟದ ಹೆಸರಿನಲ್ಲಿ ಮುಚ್ಚಿಸುವ ಅಥವಾ ಖಾಸಗೀಕರಣ ಹುನ್ನಾರ ನಡೆಯುತ್ತಿದೆ. ಈ ಆದೇಶ ರದ್ದು ಪಡಿಸಬೇಕು ಎಂದು ಶಾಸಕ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಒತ್ತಾಯ ಮಾಡಿದ ಅವರು, ಆರ್ಥಿಕವಾಗಿ ಲಾಭದಲ್ಲಿರುವ ಕೆಐಒಸಿ ಎಲ್ ಅನ್ನು ಏಕಾಏಕಿಯಾಗಿ ಮಾರಾಟದ ಮೇಲೆ ತೆರಿಗೆ ವಿಧಿಸುವ ಮೂಲಕ ಬಂದ್ ಮಾಡಲು ಮಾಡುತ್ತಿರುವ ಇಂತಹ ಆದೇಶ ಜಿಲ್ಲೆಗೆ ಮಾಡುವ ಅನ್ಯಾಯ ಎಂದವರು ಹೇಳಿದರು.
ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಜತೆ ಮಾತನಾಡಿದ್ದು, ಇಂತಹ ಆದೇಶವನ್ನು ಹಿಂಪಡೆಯಲು ಒತ್ತಾಯಿಸಲಾಗಿದೆ. ಈಗಾಗಲೇ ಎನ್‌ಎಂಪಿಟಿ, ಬಿಎಸ್‌ಎನ್‌ಎಲ್, ಏರ್‌ಪೋರ್ಟ್, ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಾಗ ಗರಿಷ್ಠ ಆಡಳಿತ ಕನಿಷ್ಟ ಆಡಳಿತದ ಮಧ್ಯಪ್ರವೇಶ ಎಂದು ಹೇಳಿಕೊಂಡಿತ್ತು. ಆದರೆ ಕಳೆದ ಏಳು ವರ್ಷಗಳಲ್ಲಿ ಸರಕಾರವೇ ಇಲ್ಲ, ಗರಿಷ್ಟ ಖಾಸಗೀಕರಣ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಆಪಾದಿಸಿದರು.
ಕೆಐಒಸಿಎಲ್ ಕಂಪನಿ 1980ರಲ್ಲಿ ಇಂದಿರಾ ಗಾಂಧಿಯವರಿಂದ ಶಂಕುಸ್ಥಾಪನೆಗೊಂಡಿತ್ತು. 1984ರಲ್ಲಿ ಗಣಿಗಾರಿಕೆ ಆರಂಭವಾಗಿ, ಪೆಲೆಟ್ ಮಾಡಿ ರಫ್ತು ಮಾಡಲಾಗುತ್ತಿತ್ತು. ಬಳಿಕ ರಾಷ್ಟ್ರೀಯ ಉದ್ಯಾನವನದ ಹಿನ್ನೆಲೆಯಲ್ಲಿ ಇಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಲಾಯಿತು. ಎನ್‌ಎಂಡಿಸಿ, ಬಳ್ಳಾರಿಯಿಂದ ಕಬ್ಬಿಣದ ಅದಿರನ್ನು ತಂದು ಪೆಲೆಟ್‌ಗಳನ್ನು ತಯಾರಿಸಿ ರಫ್ತು ಮಾಡುವ ಕಾರ್ಯ ನಡೆಯುತ್ತಿದೆ. ಇದು ಸಂಪೂರ್ಣ ಸರಕಾರಿ ಸ್ವಾಮ್ಯದ ಕಂಪೆನಿಯಾದ ಕಾರಣ ಇದಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಈ ಕಂಪನಿಯಲ್ಲಿ ಇದೀಗ ರಫ್ತಿನ ಮೇಲೆ ತೆರಿಗೆ ವಿಧಿಸುವ ಮೂಲಕ ಕಂಪೆನಿಯನ್ನೇ ಬಂದ್ ಮಾಡುವ ಹುನ್ನಾರವಾಗಿದೆ. ಆದ್ದರಿಂದ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಕಾಂಗ್ರೆಸ್ ಈ ನಿಟ್ಟಿನಲ್ಲಿ ಹೋರಾಟ ಮಾಡಲಿದೆ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವ ಚಡ್ಡಿ ಸಂಘರ್ಷದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ. ಖಾದರ್, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಾಗ ಸರಕಾರಕ್ಕೆ ಸಮಸ್ಯೆ ಆಗಿಲ್ಲ. ಸಣ್ಣಪುಟ್ಟ ವಿಚಾರಗಳಿಗೆ ಸಂಘರ್ಷ ಆದಾಗ, ಗಾಂಧಿಯನ್ನು ಕೊಂದವರನ್ನು ಮೂರ್ತಿ ಮಾಡಿ ಪೂಜಿಸಿದಾಗ, ಕುವೆಂಪು, ಡಾ. ಅಂಬೇಡ್ಕರ್, ನಾರಾಯಣಗುರು, ಅಬ್ಬಕ್ಕ, ಬಸವಣ್ಣರಿಗೆ ಅವಮಾನ ಮಾಡಿದಾಗ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಆದರೆ ಎನ್‌ಎಸ್‌ಯುಐ ಸಾಂಕೇತಿಕ ಪ್ರತಿಭಟನೆ ಮಾಡಿದಾಗ ವಿದ್ಯಾರ್ಥಿಗಳನ್ನು ಜೈಲಿಗೆ ಕಳುಹಿಸುವ ಪ್ರಕ್ರಿಯೆ ನಡೆದಿದೆ. ಇದು ಸರಕಾರದ ದ್ವಂದ್ವ ನಿಲುವು ಎಂದರು.
ಹಿಜಾಬ್ ಕುರಿತ ವಿದ್ಯಾರ್ಥಿಗಳ ಹೋರಾಟಕ್ಕೆ ಸಂಬಂಧಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಸೌಹಾರ್ದ ಸಮಾಜ ನಮಗೆ ಅತೀ ಅಗತ್ಯವಾಗಿರುವುದು. ಕಾನೂನು ವ್ಯಾಪ್ತಿಯಲ್ಲಿ ಯಾವ ರೀತಿಯ ಸಹಕಾರ ನೀಡಲು ಸಾಧ್ಯವೋ ಅದನ್ನು ಶಾಸಕನ ನೆಲೆಯಲ್ಲಿ ನಾನು ನೀಡಲಿದ್ದೇನೆ. ಮಕ್ಕಳ ಭವಿಷ್ಯದ ಬಗ್ಗೆ ನಿರ್ಧರಿಸುವವರು ಪೋಷಕರು. ಇದು ಅವರಿಗೆ ಬಿಟ್ಟ ವಿಚಾರ. ಶೈಕ್ಷಣಿಕ ವರ್ಷ ಆರಂಭವಾದ ಇದ್ದ ನಿಯಮವನ್ನು ಮಧ್ಯದಲ್ಲಿ ಬದಲು ಮಾಡುವ ಅಧಿಕಾರ ಸಿಂಡಿಕೇಟ್ ಸಮಿತಿಗೆ ಇದೆಯೇ ಎಂಬ ಬಗ್ಗೆ ದ.ಕ.ಜಿಲ್ಲಾಧಿಕಾರಿ ನಿರ್ಧರಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವುದೇ ರೀತಿಯಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತುವ, ಪ್ರತಿಭಟಿಸುವ, ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ನನ್ನ ಪ್ರಕಾರ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾದವರು ಪೋಷಕರು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೋ, ಶಾಹುಲ್ ಹಮೀದ್, ಮಮತಾ ಗಟ್ಟಿ, ಸದಾಶಿವ ಊಳ್ಳಾಲ್, ಶುಭೋದಯ ಆಳ್ವ , ನಾರಾಯಣ ನಾಯ್ಕ್, ಸುಭಾಶ್ ಕೊಳ್ನಾಡು, ಜೋಕಿಂ, ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
