ಸುರತ್ಕಲ್: ಬಂಟರ ಸಂಘದಿಂದ ನೆರವು, ಅಭಿನಂದನೆ, ವಿದ್ಯಾರ್ಥಿ ವೇತನ ವಿತರಣೆ

ಸುರತ್ಕಲ್, ಜೂ.6: ಬಂಟರ ಸಂಘ, ಸುರತ್ಕಲ್ ಇದರ ವತಿಯಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವು ಸುರತ್ಕಲ್ ಸುಭಾಷಿತ ನಗರದ ಬಂಟರ ಭವನದಲ್ಲಿ ರವಿವಾರ ಸಂಜೆ ಜರುಗಿತು.
ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾದ ಸುಧಾಕರ ಎಸ್. ಪೂಂಜಾ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಬಂಟ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಧ್ಯ ಬಿಡು ದಿ. ರಾಘು ಸಿ. ಶೆಟ್ಟಿಯವರ ಸ್ಮರಣಾರ್ಥ ಡಾ. ಟಿವಿ ಶೆಟ್ಟಿ ವರ್ಷಂಪ್ರತಿ ನೀಡುವ ಒಂದು ಲಕ್ಷ ರೂ. ಹಾಗೂ ಬಂಟರ ಸಂಘದ ವಿದ್ಯಾರ್ಥಿ ವೇತನ ನಿಧಿಯ 1.70 ಲಕ್ಷ ರೂ. ಮೌಲ್ಯದ ಬಂಟರ ಸಂಘದ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು.
ಇದೇ ಸಂದರ್ಭ 25ಕ್ಕೂ ಹೆಚ್ಚು ಬಂಟ ಸಮುದಾಯದ ಭಿನ್ನ ಸಾಮರ್ಥ್ಯ ಹಾಗೂ ವಿಕಲಚೇತನರಿಗೆ ಸಹಾಯಧನ ವಿತರಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸುರತ್ಕಲ್ ಬಂಟರ ಸಂಘ ಮತ್ತು ಮಧ್ಯ ಗುತ್ತು ಕರುಣಾಕರ ಶೆಟ್ಟಿ ಹಾಗೂ ಆರ್ಥಿಕ ಸಹಾಯದೊಂದಿಗೆ ನೂತನವಾಗಿ ನಿರ್ಮಿಸಲಾದ ಎರಡು ಮನೆಗಳನ್ನು ತುಮಕೂರು ಚಂದ್ರಶೇಖರ ಶೆಟ್ಟಿ ಮತ್ತು ಮಧ್ಯ ಶಶಿಕಲಾ ಶೆಟ್ಟಿ ಕುಟುಂಬಕ್ಕೆ ಮನೆಗಳನ್ನು ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಮುಂಬೈ ವಿ.ಕೆ. ಸಮೂಹ ಸಂಸ್ಥೆಗಳ ಮುಖ್ಯಸ್ಥ ಕರುಣಾಕರ ಎನ್. ಶೆಟ್ಟಿ ಮಧ್ಯ ಗುತ್ತು, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ವಸಂತ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಜ್ಪೆ ವಲಯ ಬಂಟರ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ ಹಾಗೂ ಸುರತ್ಕಲ್ ಬಂಟರ ಸಂಘದ ವಿವಿಧ ಘಟಕಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.