ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಪ್ರತಿಭಟನೆ

ಮಂಗಳೂರು: ಬಿಹಾರದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ವತಿಯಿಂದ ಸೋಮವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ವಿಮ್ ದ.ಕ. ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿ ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಸರಕಾರಗಳ ವೈಫಲ್ಯವೇ ಇದಕ್ಕೆ ಕಾರಣವಾಗಿದೆ. ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಸರಕಾರವು ಅತ್ಯಾಚಾರಿಗಳನ್ನು ಪೋಷಿಸುತ್ತಾ ಇದೆ. ಕೆಲವೊಂದು ಮನುವಾದಿ ಮನೋಸ್ಥಿತಿಯ ಪೊಲೀಸ್ ಅಧಿಕಾರಿಗಳಿಂದ ನೈಜ ಆರೋಪಿಗಳ ಬಂಧನವಾಗುತ್ತಿಲ್ಲ ಎಂದು ಆರೋಪಿಸಿದರು.
ದೇಶದಲ್ಲಿ ನಿರ್ದಿಷ್ಟ ಸಮುದಾಯ ಮತ್ತು ಆ ಸಮುದಾಯದ ಹೆಣ್ಮಕ್ಕಳನ್ನು ಗುರಿಪಡಿಸಲಾಗುತ್ತಿದೆ. ಹೆಣ್ಮಕ್ಕಳಿಗೆ ರಕ್ಷಣೆ ಕೊಡುವಲ್ಲಿ ಸರಕಾರ ವಿಫಲವಾಗಿದೆ, ಸರಕಾರದ ನೀಚ ಕೆಲಸಗಳಿಗೆ ವಿಪಕ್ಷಗಳು ಕೂಡ ಕಾರಣವಾಗಿದೆ. ವಿಪಕ್ಷಗಳು ಪ್ರಮುಖ ಸಮಸ್ಯೆಗಳ ಬಗ್ಗೆ ಸ್ಪಷ್ಟ ನಿಲುವು ತಾಳುವುದಿಲ್ಲ ಎಂದು ಹೇಳಿದರು.
ವಿಮ್ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷೆ ಶಾಕಿರಾ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ವಿಮ್ ಜಿಲ್ಲಾ ಕಾರ್ಯದರ್ಶಿ ಝಹಾನ ಬಂಟ್ವಾಳ, ಎಸ್‌ಡಿಪಿಐ ದ.ಕ. ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ವಿದ್ಯಾರ್ಥಿ ನಾಯಕಿ ಇಫ್ರತ್ ಮತ್ತಿತರರು ವಹಿಸಿದ್ದರು.