ಪರಿಸರ ಸಂರಕ್ಷಣೆಯ ಜವಾಬ್ದಾರಿ ಮನೆಯಿಂದಲೇ ಆರಂಭವಾಗಬೇಕು: ನ್ಯಾ. ಶೋಭಾ

ಮಂಗಳೂರು : ಪರಿಸರ ಸಂರಕ್ಷಣೆಯ ಜವಾಬ್ದಾರಿ ಮನೆಯಿಂದಲೇ ಆರಂಭವಾಗಬೇಕು, ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳು ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭ ಬಿ.ಜಿ. ಕರೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ದ.ಕ.ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸುರತ್ಕಲ್ ಗೋಂವಿದದಾಸ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಸೋಮವಾರ ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃಧ್ಧಿ ಮತ್ತು ನಾಶ ಒಟ್ಟಿಗೆ ಸಾಗಬಾರದು. ಇರುವ ಒಂದೇ ಭೂಮಿಯನ್ನು ರಕ್ಷಿಸಲು ಸರಕಾರ ಮಾಡಿದ ಸುರಕ್ಷತಾ ಕಾನೂನುಗಳನ್ನು ಪಾಲಿಸುವವರೆಗೆ ಯಾವುದೇ ಸಮಸ್ಯೆ ಆಗಲಾರದು. ನಮ್ಮ ಜವಾಬ್ದಾರಿಗಳನ್ನು ಅರಿತು ನಡೆದಾಗ ಪರಿಸರಸಹ್ಯ ಬಾಳ್ವೆಯನ್ನು ಮುಂದಿನ ಜನಾಂಗಕ್ಕೂ ನೀಡಿದಂತಾಗುತ್ತದೆ ಎಂದರು.
ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ನಿರ್ದೇಶಕ ಪ್ರೊ.ಜಿ. ನಿಕೇತನ್, ಪರಿಸರ ಅಧಿಕಾರಿ ಕೀರ್ತಿ ಕುಮಾರ್, ಸಿಆರ್‌ಝೆಡ್ ಅಧಿಕಾರಿ ಮಹೇಶ್ ಕುಮಾರ್, ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಪರಿಸರದ ದಿನದ ಪ್ರಯುಕ್ತ ಪ್ರಶಸ್ತಿ ಸ್ವೀಕರಿಸಿದ ಆಮೈ ಮಹಾಲಿಂಗ ನಾಯ್ಕ್ ಮತ್ತು ಉಳ್ಳಾಲದ ಪರಿಸರ ಸ್ನೇಹಿ ಮಾಧವ ಮಾತನಾಡಿದರು.
ಡಾ.ಸ್ಮಿತಾ ಹೆಗ್ಡೆ ಉಪನ್ಯಾಸ ನೀಡಿದರು. ಹಿರಿಯ ನಿವೃತ್ತ ವೈಜ್ಞ್ಞಾನಿಕ ಅಧಿಕಾರಿ ಜಯಪ್ರಕಾಶ್ ಎನ್.ನಾಯಕ್, ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಎಚ್.ಶ್ರೀರಂಗ, ಸಂಘದ ಉಪಾಧ್ಯಕ್ಷ ವೈ.ರತ್ನಾಕರ್ ರಾವ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ.ಪಿ, ಮತ್ತಿತರರು ಉಪಸ್ಥಿತರಿದ್ದರು.