ಹಿರಿತನ ಕಳೆದುಕೊಳ್ಳುತ್ತಿರುವ ಹಿರಿಯರ ಮನೆ

ದೇಶದಲ್ಲಿ ಹಿರಿಯರ ಮನೆ ಅಥವಾ ಎಲ್ಡರ್ಸ್ ಹೌಸ್ ಎಂಬ ಹೆಸರಿಗೆ ರಾಜ್ಯಸಭೆ ಪಾತ್ರವಾಗಿತ್ತು. ದೇಶದ 130 ಕೋಟಿ ಜನರ ಭವಿಷ್ಯವನ್ನು ಕಟ್ಟುವಂತಹ ನಿರ್ಣಯಗಳನ್ನು ಕೈಗೊಳ್ಳುವಂತಹ ವಿಚಾರದಲ್ಲಿ ಲೋಕಸಭೆಯಷ್ಟೇ ಪಾತ್ರ ರಾಜ್ಯಸಭೆಯಲ್ಲೂ ಇರುತ್ತದೆ.
1952ರ ಮೇ 11ರಂದು ಪ್ರಥಮಬಾರಿಗೆ ಸೇರಿದಂತಹ ರಾಜ್ಯಸಭೆ ಒಟ್ಟು 255 ಸದಸ್ಯರನ್ನು ಹೊಂದಿದ್ದು, 243 ಮಂದಿ ವಿವಿಧ ರಾಜ್ಯಗಳಿಂದ ವಿಧಾನಸಭೆಗಳ ಮೂಲಕ ಆಯ್ಕೆಯಾಗಿ ಬರುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದಂತಹ 12 ಮಂದಿ ಸಾಧಕರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲ್ಪಡುತ್ತಾರೆ.
ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಪ್ರಧಾನಮಂತ್ರಿಯಾಗಿದ್ದ ದೇವೇಗೌಡರು, ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್, ರಾಮಕೃಷ್ಣಹೆಗಡೆ, ಎಸ್.ಆರ್. ಬೊಮ್ಮಾಯಿ, ಎಸ್.ಎಂ.ಕೃಷ್ಣರವರು ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಅದೇ ರೀತಿಯಲ್ಲಿ ನಾಡಿನ ಅತ್ಯಂತ ಪ್ರಮುಖ ನಾಯಕರಾಗಿದ್ದ ಎಚ್.ಸಿ. ದಾಸಪ್ಪ, ಟಿ.ಎ. ಪೈ, ಟಿ. ಸಿದ್ದಲಿಂಗಯ್ಯ, ಡಾ. ನಾಗಪ್ಪಆಳ್ವ ಮುಂತಾದವರು ಸಹ ರಾಜ್ಯಸಭೆಯ ಸದಸ್ಯರಾಗಿದ್ದರು. ಗುರುಪಾದ ಸ್ವಾಮಿ, ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಮುಂತಾದವರು ರಾಜ್ಯಸಭೆಯಲ್ಲಿ ರಾಜ್ಯದ ಗೌರವವನ್ನು ಕಾಪಾಡಿರುತ್ತಾರೆ. ಹನುಮಂತಯ್ಯ, ಬಿ.ಕೆ. ಹರಿಪ್ರಸಾದ್ ಮುಂತಾದವರು ಸಹ ರಾಜ್ಯಸಭೆ ಸದಸ್ಯರಾಗಿದ್ದರು. ಕೆ.ಬಿ. ಶರಣಪ್ಪ, ಪ್ರೊಫೆಸರ್ ಲಕ್ಷ್ಮೀಸಾಗರ್, ಲೀಲಾದೇವಿ ಆರ್. ಪ್ರಸಾದ್, ಶಿಕ್ಷಣ ತಜ್ಞ ಪ್ರಭಾಕರ್ ಕೋರೆ ಮುಂತಾದವರು ಸಹ ಸದನದಲ್ಲಿ ಸದಸ್ಯರಾಗಿದ್ದರು. ಅತ್ಯುತ್ತಮ ಸಂಸದೀಯ ಪಟುಗಳ ಸಾಲಿನಲ್ಲಿ ನಿಲ್ಲುವಂತಹ ಡಿ.ಬಿ. ಚಂದ್ರೇಗೌಡರವರು ಸಹ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದರು. ಎಂ.ವಿ. ರಾಜಶೇಖರ ಮೂರ್ತಿ, ರಾಜಶೇಖರನ್, ಶ್ರೇಷ್ಠ ವಾಗ್ಮಿ ಜಗನ್ನಾಥ್ ಜೋಷಿಯವರು ಕೂಡಾ ಒಂದು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಪ್ರತಿನಿಧಿಸಿದ್ದರು. ಇವರೆಲ್ಲ ತಮಗೆ ಸಿಕ್ಕ ಅವಕಾಶವನ್ನು ರಾಜ್ಯಸಭೆಯಲ್ಲಿ ರಾಜ್ಯದ ಹಿತವನ್ನು ಕಾಯುವಲ್ಲಿ ಬಳಸಿದ್ದಾರೆ. ಸಾಹಿತ್ಯ ವಲಯದಿಂದ ಪಾಟೀಲ ಪುಟ್ಟಪ್ಪನವರು ರಾಜ್ಯಸಭಾ ಸದಸ್ಯರಾಗಿದ್ದರು. ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದ ಸರೋಜಿನಿ ಮಹಿಷಿ ಸಹ ರಾಜ್ಯಸಭಾ ಸದಸ್ಯರಾಗಿದ್ದರು. ಇವರಲ್ಲಿ ಗುರುಪಾದ ಸ್ವಾಮಿ, ಟಿ.ಎ. ಪೈ, ಪಾಟೀಲ ಪುಟ್ಟಪ್ಪ, ಡಿ.ಬಿ. ಚಂದ್ರೇಗೌಡ, ಹನುಮಂತಪ್ಪ, ಎಚ್.ಡಿ. ದೇವೇಗೌಡ ಮುಂತಾದವರು ಕರ್ನಾಟಕದ ವಿಚಾರದಲ್ಲಿ ಪ್ರಬಲವಾದಂತಹ ವಾದವನ್ನು ಮಾಡಿರುವ ದಾಖಲೆಗಳಿವೆ. ಇತ್ತೀಚಿನ ದಿನಗಳಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿ ತಮ್ಮ ಪ್ರಭಾವವನ್ನು ಬೀರುತ್ತಿದ್ದಾರೆ. ಈ ರೀತಿಯಲ್ಲಿ ಬಹಳಷ್ಟು ಹಿರಿಯರು, ಅನುಭವಶಾಲಿಗಳು, ಮೇಧಾವಿಗಳು ರಾಜ್ಯಸಭೆಯನ್ನು ಕರ್ನಾಟಕದ ಮೂಲಕ ಪ್ರತಿನಿಧಿಸಿ ಇದರ ಗೌರವವನ್ನು ಹೆಚ್ಚಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿರುವ ಹೆಸರುಗಳನ್ನು ಗಮನಿಸಿದಾಗ ಇವರಲ್ಲಿ ಹೆಚ್ಚಿನವರಿಂದ ರಾಜ್ಯಕ್ಕೆ ಯಾವ ಅನುಕೂಲವೂ ಆಗುವುದು ಕನಸಿನ ಮಾತು. ಕಾರಣ ರಾಜ್ಯಸಭೆಯಲ್ಲಿ ಪ್ರಭಾವವನ್ನು ಬೀರಬೇಕಾದರೆ ರಾಜಕೀಯದ ಅನುಭವವಿರಬೇಕು, ಅನಿವಾರ್ಯವಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿರಬೇಕು. ಮಾಹಿತಿಗಳ ಆಧಾರದ ಮೇಲೆ ಚರ್ಚೆಗಳಲ್ಲಿ ಪಾಲ್ಗೊಂಡು ಮಾತನಾಡುವುದರ ಜೊತೆಗೆ ಕೇಂದ್ರ ಸರಕಾರಗಳಿಂದ ರಾಜ್ಯದ ವಿಚಾರಗಳಲ್ಲಿ ಅನ್ಯಾಯಗಳಾಗುವ ನಿರ್ಣಯಗಳು ಬಂದ ಸಂದರ್ಭದಲ್ಲಿ ನಿರ್ಭಯವಾಗಿ, ನಿಷ್ಪಕ್ಷವಾಗಿ ಪ್ರಬಲವಾದಂತಹ ವಾದವನ್ನು ಮಂಡಿಸುವ ದಿಟ್ಟತನವೂ ಇರಬೇಕು. ಇಂತಹ ಗುಣಗಳನ್ನು ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಈಗಿನ ವ್ಯಕ್ತಿಗಳಿಂದ ಬಯಸುವುದಾದರೂ ಹೇಗೆ? ಕೇವಲ ಜಾತಿ, ಮತ, ಧರ್ಮ ರಾಜಕೀಯ ಲೆಕ್ಕಾಚಾರಗಳ ಕಾರಣಕ್ಕೆ ಪ್ರತಿನಿಧಿಗಳನ್ನು ಕಳುಹಿಸಿಕೊಡುವುದರಿಂದ ಹಿರಿಯರ ಮನೆಯ ಹಿರಿತನ ಕುಗ್ಗುತ್ತದೆ. ದೇಶದ ಕೋಟ್ಯಂತರ ಜನರ ಬದುಕಿಗಾಗಿ ರೂಪಿಸುವಂತಹ ಕಾನೂನುಗಳ ವಿಚಾರದಲ್ಲಿ ಮಾತನಾಡುವ ಆಳವಾದ ಜ್ಞಾನವಿಲ್ಲದಿದ್ದರೂ ಸಂಕ್ಷಪ್ತವಾದ ಮಾಹಿತಿಯೊಂದಿಗೆ ತಮ್ಮ ಪ್ರತಿನಿಧಿತ್ವವನ್ನು ದೃಢೀಕರಿಸುವವರು ಬೇಕಾಗಿದ್ದಾರೆ. ನಿರ್ಮಲಾ ಸೀತಾರಾಮನ್‌ರಂತಹ ಬೇರೆ ಜಿಲ್ಲೆಯ ಹಲವು ಮಂದಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರಾದರೂ ಇವರಿಂದ ರಾಜ್ಯಕ್ಕೆ ಹೆಚ್ಚಿನದನ್ನು ಬಯಸಲು ಸಾಧ್ಯವಿಲ್ಲ. ಇನ್ನು ಕೆಲವು ಉದ್ಯಮಿಗಳು, ಶ್ರೀಮಂತರು, ಚುನಾವಣೆಗಳಲ್ಲಿ ಸೋತವರು, ರಾಜಕೀಯವಾಗಿ ನೆಲೆಯನ್ನು ಕಂಡುಕೊಳ್ಳುವ ಸಲುವಾಗಿ ರಾಜ್ಯಸಭೆಯನ್ನು ಪ್ರವೇಶಿಸಿದ ಉದಾಹರಣೆಗಳಿವೆ. ಅದೆಷ್ಟೋ ಮಂದಿ ರಾಜ್ಯಸಭಾ ಸದಸ್ಯರಾಗಿರುವುದು ಅವರೊಬ್ಬರಿಗೆ ಬಿಟ್ಟರೆ ಬೇರೆಯವರಿಗೆ ತಿಳಿದೇ ಇರಲಿಲ್ಲ. ರಾಜ್ಯದಿಂದ 12 ಮಂದಿ ರಾಜ್ಯಸಭಾ ಸದಸ್ಯರ ಪೈಕಿ ಅವರ ಹೆಸರುಗಳನ್ನು ಹೇಳಲು ಬಹಳಷ್ಟು ಮಂದಿಗೆ ಸಾಧ್ಯವೇ ಆಗಿರುವುದಿಲ್ಲ. ಕಾರಣ ಇವರ ಇರುವಿಕೆಯೇ ತಿಳಿದಿರುವುದಿಲ್ಲ. ಒಟ್ಟಾರೆ ರಾಜ್ಯದಲ್ಲಿ ವಿಧಾನ ಪರಿಷತ್ ಬುದ್ಧಿಜೀವಿಗಳ ಮನೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿರುವ ರೀತಿಯಲ್ಲೇ ದೇಶದ ಹಿರಿಯರ ಮನೆ ತನ್ನ ಹಿರಿತನವನ್ನು ಕಳೆದುಕೊಳ್ಳುತ್ತಿದೆ.







