ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ
ಬೆಂಗಳೂರು, ಜೂ. 6: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಪ್ರತಿವರ್ಷದಂತೆ 2022-23ನೆ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ‘ಅರಿವು ಶೈಕ್ಷಣಿಕ ಸಾಲ' ಯೋಜನೆ, ಟ್ಯಾಕ್ಸಿ/ಗೂಡ್ಸ್/ಪ್ಯಾಸೆಂಜರ್ ಆಟೋರಿಕ್ಷಾ ವಾಹನ ಖರೀದಿ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ ಮತ್ತು ಸ್ವಯಂ ಉದ್ಯೋಗ ಯೋಜನೆಗಳಲ್ಲಿ ಸಾಲ ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ(ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಭೌದ್ದರು, ಸಿಖ್ಖರು, ಪಾರ್ಸಿ ಜನಾಂಗದವರಿಂದ) ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು, ಸರಕಾರಿ ಆದೇಶದಲ್ಲಿ ಸೂಚಿಸಿದಂತೆ ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 15 ವರ್ಷದಿಂದ ಖಾಯಂ ನಿವಾಸಿಯಾಗಿರಬೇಕು. ಯೋಜನೆ ಸಂಬಂಧಿಸಿದಂತೆ ನಗರ ಪ್ರದೇಶದಲ್ಲಿ ವಾಸ ಮಾಡುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವಾಸ ಮಾಡುವ ಕುಟುಂಬದ ವಾರ್ಷಿಕ ಆದಾಯ ಮತ್ತು ವಯಸ್ಸಿನ ಮಿತಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷಗಳು. ಶೇ.33ರಷ್ಟು ಮಹಿಳೆಯರಿಗೆ, ಶೇ.3ರಷ್ಟು ಅಂಗವಿಕಲರಿಗೆ ಮತ್ತು ಶೇ.2ರಷ್ಟು ಮಾಜಿ ಸೈನಿಕರಿಗೆ ಮೀಸಲಾತಿ ಇರುತ್ತದೆ.
ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಗುರುತಿನಚೀಟಿ, ಬ್ಯಾಂಕ್ ಖಾತೆ ಪುಸ್ತಕ ಪ್ರತಿ, ಯೋಜನಾ ವರದಿ ಹಾಗೂ ಅರ್ಜಿದಾರರ ಹಾಗೂ ಜಾಮೀನುದಾರರ 2 ಭಾವಚಿತ್ರಗಳು ಲಗತ್ತಿಸಿರಬೇಕು. ಈ ಹಿಂದೆ ನಿಗಮದ ಸೌಲಭ್ಯವನ್ನು ಪಡೆದವರು ಪುನಃ ಈ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ. ಅರ್ಜಿದಾರರು ಕಡ್ಡಾಯವಾಗಿ ಐಎಫ್‍ಎಸ್‍ಸಿ ಕೋಡ್ ಇರುವ ಬ್ಯಾಂಕ್ ಖಾತೆ ಪಾಸ್ ಬುಕ್ ಪ್ರತಿಯನ್ನು ಸಲ್ಲಿಸಬೇಕು.
ಆನ್‍ಲೈನ್ http://kmdconline.karnataka.gov.in ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ಜುಲೈ 15 ಕೊನೆಯ ದಿನವಾಗಿರುತ್ತದೆ. ಅರ್ಜಿಯ ಪ್ರತಿ ಹಾಗೂ ದಾಖಲಾತಿಗಳೊಂದಿಗೆ ನಿಗಮದ ಕಚೇಗೆ ಜುಲೈ 15ರೊಳಗಾಗಿಯೇ ಸಲ್ಲಿಸಬೇಕಾಗಿರುತ್ತದೆ. ಆನ್‍ಲೈನ್ ಅರ್ಜಿಗಳನ್ನು ಜುಲೈ 15ರ ಒಳಗೆ ಯಾವುದಾದರೂ ಸೈಬರ್ ಸೆಂಟರ್‍ನಲ್ಲಿ ಸಲ್ಲಿಸಿ, ಪ್ರಿಂಟ್ ತೆಗೆದು, ಅಗತ್ಯ ದಾಖಲಾತಿಗಳನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ)., ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಉತ್ತರ ವಿಭಾಗ, ನಂ.40, 2ನೆ ಅಡ್ಡರಸ್ತೆ, ಇಯರಿಂಗ್ ಕ್ಲಿನಿಕ್ ಎದುರು, ನೂರ್ ಮಸೀದಿ ಹತ್ತಿರ, 4ನೆ ಮುಖ್ಯರಸ್ತೆ, ವಸಂತಪ್ಪ ಬ್ಲಾಕ್, ಗಂಗಾನಗರ, ಬೆಂಗಳೂರು-560032 ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 080-2353 9786ಕ್ಕೆ ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.







