ಕೀವ್ ನಲ್ಲಿ ಪಾಶ್ಚಿಮಾತ್ಯ ಶಸ್ತ್ರಾಸ್ತ್ರ ದಾಸ್ತಾನು ಧ್ವಂಸಗೊಳಿಸಿದ್ದೇವೆ: ರಶ್ಯಾ

IMAGE SOURCE: GETTY IMAGES
ಕೀವ್, ಜೂ.6: ಉಕ್ರೇನ್ ಗೆ ದೀರ್ಘಶ್ರೇಣಿಯ ರಾಕೆಟ್ ವ್ಯವಸ್ಥೆ ರವಾನಿಸುವುದರ ವಿರುದ್ಧ ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ರವಾನಿಸಿದ ಮರುದಿನವೇ ಉಕ್ರೇನ್ ರಾಜಧಾನಿ ಕೀವ್ನಲ್ಲಿ ದಾಸ್ತಾನಿರಿಸಿದ್ದ ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳನ್ನು ಕ್ಷಿಪಣಿ ದಾಳಿಯ ಮೂಲಕ ಧ್ವಂಸಗೊಳಿಸಿರುವುದಾಗಿ ರಶ್ಯ ಸೋಮವಾರ ಹೇಳಿದೆ.
ಇದು ಕಳೆದ ಸುಮಾರು 1 ತಿಂಗಳ ಬಳಿಕ ಕೀವ್ ಮೇಲೆ ರಶ್ಯ ನಡೆಸಿದ ದಾಳಿಯಾಗಿದೆ. ಇದರೊಂದಿಗೆ ತನ್ನೆಲ್ಲಾ ಪಡೆಗಳನ್ನು ಉಕ್ರೇನ್ನ ಪೂರ್ವಪ್ರಾಂತದಲ್ಲಿ ಕೇಂದ್ರೀಕರಿಸಿದ್ದರೂ ಈಗಲೂ ರಾಜಧಾನಿ ಕೀವ್ ಮೇಲೆ ದಾಳಿ ನಡೆಸುವ ಸಾಮರ್ಥ್ಯ ತನ್ನಲ್ಲಿದೆ ಎಂದು ರಶ್ಯ ಜಾಹೀರುಪಡಿಸಿದೆ. ಉಕ್ರೇನ್ಗೆ 700 ಮಿಲಿಯನ್ ಡಾಲರ್ ಮೊತ್ತದ ಭದ್ರತಾ ನೆರವು ಒದಗಿಸುವುದಾಗಿ ಘೋಷಿಸಿದ್ದ ಅಮೆರಿಕ, ಇದರಲ್ಲಿ 4 ನಿಖರ ಮಾರ್ಗದರ್ಶಿ, ಮಧ್ಯಮ ಶ್ರೇಣಿಯ ರಾಕೆಟ್ ವ್ಯವಸ್ಥೆ, ಹೆಲಿಕಾಪ್ಟರ್ಗಳು, ಟ್ಯಾಂಕ್ ನಿರೋಧಕ ವ್ಯವಸ್ಥೆ, ರೇಡಾರ್ಗಳು, ಯುದ್ಧತಂತ್ರದ ವಾಹನಗಳು ಸೇರಿವೆ. ಇವು ಉಕ್ರೇನ್ಗೆ ತಲುಪಲು ಕನಿಷ್ಟ 3 ವಾರ ಕಾಯಬೇಕು ಎಂದು ಹೇಳಿತ್ತು. ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆ ಉಕ್ರೇನ್ ಕೈಗೆ ಸಿಗುವುದರೊಳಗೆ ಪೂರ್ವಪ್ರಾಂತದ ಪ್ರಮುಖ ಕೈಗಾರಿಕಾ ಕೇಂದ್ರ ಡೋನ್ಬಾಸ್ ಪ್ರದೇಶವನ್ನು ಕೈವಶ ಮಾಡಿಕೊಳ್ಳುವುದು ರಶ್ಯದ ಯೋಜನೆಯಾಗಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಕೀವ್ಗೆ ಅಪ್ಪಳಿಸಿದ ಕ್ಷಿಪಣಿಯು ಪೂರ್ವ ಯುರೋಪಿಯನ್ ದೇಶಗಳು ಒದಗಿಸಿದ ಟಿ-72 ಟ್ಯಾಂಕ್ಗಳನ್ನು ಧ್ವಂಸಗೊಳಿಸಿದ್ದು ಇತರ ಹಲವು ಸೇನಾ ವಾಹನಗಳೂ ಧ್ವಂಸಗೊಂಡಿವೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಆದರೆ ಇದನ್ನು ನಿರಾಕರಿಸಿರುವ ಉಕ್ರೇನ್, ರೈಲು ರಿಪೇರಿ ಕೇಂದ್ರಕ್ಕೆ ರಶ್ಯದ ಕ್ಷಿಪಣಿ ಅಪ್ಪಳಿಸಿದೆ. ಶಸ್ತ್ರಾಸ್ತ್ರಗಳಿಗೆ ಯಾವುದೇ ಹಾನಿಯಾಗಿಲ್ಲ , ರಶ್ಯ ಪ್ರಯೋಗಿಸಿದ ಒಂದು ಕ್ಷಿಪಣಿಯನ್ನು ತುಂಡರಿಸಲಾಗಿದೆಮ ಉಳಿದ 4 ಕ್ಷಿಪಣಿ ಮೂಲಸೌಕರ್ಯಕ್ಕೆ ಅಪ್ಪಳಿಸಿದೆ ಎಂದಿದೆ. ಡೊನೆಟ್ಸ್ಕ್ ಪ್ರಾಂತದಲ್ಲಿ ಹಾನಿಗೊಳಗಾದ ಸೇನಾ ವಾಹನಗಳನ್ನು ದುರಸ್ತಿಗೊಳಿಸುವ ಕಾರ್ಖಾನೆಯನ್ನು ಪ್ರಿಸಿಷನ್ ಕ್ಷಿಪಣಿಯಿಂದ ಧ್ವಂಸಗೊಳಿಸಲಾಗಿದೆ ಎಂದು ರಶ್ಯ ಪ್ರತಿಪಾದಿಸಿದೆ. ಪೂರ್ವ ಉಕ್ರೇನ್ನ ಸಿವಿಯೆರೊಡೊನೆಟ್ಸ್ಕ್ ನಗರದಲ್ಲಿ ಉಕ್ರೇನ್ಗೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ಉಕ್ರೇನ್ ಪಡೆಗಳು ರಶ್ಯದ ಸೇನೆ ಮುಂದೊತ್ತಿ ಬರದಂತೆ ತೀವ್ರ ಪ್ರತಿರೋಧ ಒಡ್ಡಿದೆ ಎಂದು ಪ್ರಾದೇಶಿಕ ಗವರ್ನರ್ ಸೋಮವಾರ ಹೇಳಿದ್ದಾರೆ.
ಈ ಮಧ್ಯೆ, ಆಯಕಟ್ಟಿನ ಬಂದರು ನಗರದಿಂದ ತೆರಳುವಾಗ ಉಕ್ರೇನ್ನ ಯೋಧರು ಗೋಧಿ, ಜೋಳ ಸಹಿತ ಹಲವು ಟನ್ಗಳಷ್ಟು ಆಹಾರ ಧಾನ್ಯಗಳನ್ನು ಸುಟ್ಟುಹಾಕಿದ್ದಾರೆ ಎಂದು ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್(ಡಿಪಿಆರ್)ನ ಅಧ್ಯಕ್ಷರ ಸಲಹೆಗಾರ ಯಾನ್ ಗಾಗಿನ್ ಹೇಳಿದ್ದಾರೆ. ಮರಿಯುಪೋಲ್ ಬಂದರಿನ ಉಗ್ರಾಣದಲ್ಲಿ ಹಲವು ಟನ್ಗಳಷ್ಟು ಆಹಾರಧಾನ್ಯಗಳ ದಾಸ್ತಾನು ಇತ್ತು. ನಗರದಿಂದ ಹೊರಹೋಗುವ ಸಂದರ್ಭ ಉಕ್ರೇನ್ ಯೋಧರು ಅದಕ್ಕೆ ಬೆಂಕಿ ಹಚ್ಚಿದ್ದು ಅವು ಈಗ ಬಳಸಲು ಯೋಗ್ಯವಾಗಿಲ್ಲ ಎಂದವರು ಹೇಳಿದ್ದಾರೆ.
ಉಕ್ರೇನ್ನಲ್ಲಿನ ಸಂಘರ್ಷದಿಂದ ಬಿಕ್ಕಟ್ಟು ಉಲ್ಬಣಿಸಿದ್ದರೂ ರಶ್ಯವು ಅಮೆರಿಕದಲ್ಲಿನ ತನ್ನ ದೂತಾವಾಸವನ್ನು ಮುಚ್ಚಬಾರದು. ಯಾಕೆಂದರೆ ವಿಶ್ವದ ಅತೀ ದೊಡ್ಡ 2 ಪರಮಾಣು ಶಕ್ತ ದೇಶಗಳ ನಡುವಿನ ಮಾತುಕತೆ ಮುಂದುವರಿಯಬೇಕು ಎಂದು ರಶ್ಯಕ್ಕೆ ಅಮೆರಿಕದ ರಾಯಭಾರಿ ಆಗ್ರಹಿಸಿದ್ದಾರೆ. ಉಕ್ರೇನ್ ಮೇಲಿನ ಆಕ್ರಮಣವು ರಶ್ಯದ ಇತಿಹಾಸದ ಪ್ರಮುಖ ಘಟನೆಯಾಗಿದೆ. 1991ರಲ್ಲಿ ಸೋವಿಯಟ್ ಒಕ್ಕೂಟ ಪತನವಾದಂದಿನಿಂದ ರಶ್ಯವನ್ನು ಅಮೆರಿಕ ಅವಮಾನಿಸುತ್ತಾ ಬಂದಿತ್ತು. ಉಕ್ರೇನ್ ಮೇಲಿನ ಆಕ್ರಮಣವು ಅಮೆರಿಕದ ಅಧಿಪತ್ಯದ ವಿರುದ್ಧದ ದಂಗೆಯಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೀಡಿದ್ದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ರಶ್ಯ ವಿದೇಶಾಂಗ ಸಚಿವರ ವಿಮಾನ ಸಂಚಾರಕ್ಕೆ ಅಡ್ಡಿ
ಈ ಮಧ್ಯೆ, ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಸೋಮವಾರ ಸರ್ಬಿಯಾಕ್ಕೆ ಭೇಟಿ ನೀಡಿ ಅಲ್ಲಿನ ಆಡಳಿತದೊಂದಿಗೆ ಮಾತುಕತೆ ನಡೆಸುವ ಯೋಜನೆ ರದ್ದಾಗಿದೆ ಎಂದು ವರದಿಯಾಗಿದೆ. ಸರ್ಬಿಯಾದ ನೆರೆಯ ದೇಶಗಳು ತಮ್ಮ ವಾಯುಪ್ರದೇಶದ ಮೂಲಕ ಲಾವ್ರೋವ್ ಅವರ ವಿಮಾನ ಸಂಚರಿಸಲು ಅವಕಾಶ ನಿರಾಕರಿಸಿವೆ . ಇದು ಸಂವಹನಕ್ಕೆ ಬಾಗಿಲು ಮುಚ್ಚಿದ ಮತ್ತೊಂದು ಪ್ರಕ್ರಿಯೆಯಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ ಟ್ವೀಟ್ ಮಾಡಿದ್ದಾರೆ.
ಬಲ್ಗೇರಿಯಾ, ನಾರ್ಥ್ ಮೆಸಡೋನಿಯಾ ಮತ್ತು ಮಾಂಟೆನೆಗ್ರೊ ದೇಶಗಳು ಲಾವ್ರೋವ್ ವಿಮಾನ ಸಂಚಾರಕ್ಕೆ ಅವಕಾಶ ನಿರಾಕರಿಸಿವೆ ಎಂದು ಸರ್ಬಿಯಾದ ಪತ್ರಿಕೆ ವರದಿ ಮಾಡಿದೆ.