ಅವಿಶ್ವಾಸ ನಿರ್ಣಯ ಮತದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗೆಲುವು

ಬೋರಿಸ್ ಜಾನ್ಸನ್
ಲಂಡನ್: ಬ್ರಿಟನ್ನಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಪೂರ್ಣ ಬೆಂಬಲದಿಂದಾಗಿ ಪ್ರಧಾನಿ ಬೋರಿಸ್ ಜಾನ್ಸನ್, ಅವಿಶ್ವಾಸ ನಿರ್ಣಯ ಮತದಲ್ಲಿ ಗೆಲುವು ಸಾಧಿಸಿದ್ದಾರೆ.
ಪಕ್ಷದ ಬಂಡಾಯದಿಂದಾಗಿ ಜಾನ್ಸನ್ ನಾಯಕತ್ವ ದುರ್ಬಲವಾಗಿ, ಭವಿಷ್ಯ ಅನಿಶ್ಚಿತವಾಗಿದ್ದರೂ, ಸದ್ಯಕ್ಕೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ.
ಹಗರಣಗಳ ತೀವ್ರತೆಯನ್ನು ಕುಗ್ಗಿಸುವ ಸಾಮರ್ಥ್ಯಕ್ಕೆ ಹೆಸರಾದ ಜಾನ್ಸನ್, ತಮ್ಮದೇ ಸರ್ಕಾರ ವಿಧಿಸಿದ್ದ ಕೋವಿಡ್-19 ನಿರ್ಬಂಧಗಳನ್ನು ಉಲ್ಲಂಘಿಸಿ ಪಾರ್ಟಿ ಮಾಡಿದ ಆರೋಪದ ಕಾವು ತಣಿಸಲು ಸಾಕಷ್ಟು ಶ್ರಮಪಡಬೇಕಾಯಿತು. ಅವರ ಪಕ್ಷದ ಸಂಸದರಲ್ಲಿ ಇವರನ್ನು ಬೆಂಬಲಿಸುವವರ ಸಂಖ್ಯೆ ಕುಗ್ಗಿದ್ದು, ಮತದಾರರ ಜತೆ ಸಂಪರ್ಕ ಸಾಧಿಸುವ ಚಾಕಚಕ್ಯತೆ ಹೊಂದಿರುವ ಜಾನ್ಸನ್ ಇದೀಗ ಪಕ್ಷಕ್ಕೆ ಆಸ್ತಿಯಾಗುವ ಬದಲು ಹೆಚ್ಚು ಹೆಚ್ಚಾಗಿ 'ಋಣ'ವಾಗುವ ಸಾಧ್ಯತೆ ಕಾಣಿಸುತ್ತಿದೆ ಎನ್ನಲಾಗಿದೆ.
359 ಮಂದಿ ಕನ್ಸರ್ವೇಟಿವ್ ಸಂಸದರ ಪೈಕಿ 211 ಮಂದಿಯ ಬೆಂಬಲವನ್ನು ಜಾನ್ಸನ್ ಪಡೆದರು. ಇದು ಅಧಿಕಾರದಲ್ಲಿ ಮುಂದುವರಿಯಲು ಅಗತ್ಯವಿದ್ದ ಸರಳ ಬಹುಮತಕ್ಕಿಂತ ಅಧಿಕ. ಆದಾಗ್ಯೂ 148 ಮಂದಿ ಸಂಸದರು ಜಾನ್ಸನ್ ವಿರುದ್ಧವಾಗಿದ್ದಾರೆ ಎನ್ನುವುದು ಗಮನಾರ್ಹ. ಅವರ ಉತ್ತರಾಧಿಕಾರಿಯಾಗಲು ಮುಂಚೂಣಿ ನಾಯಕರು ಕಾಣಿಸಿಕೊಂಡಿಲ್ಲವಾದ್ದರಿಂದ ಅವರು ಈ ಸವಾಲನ್ನು ಸೋಲಿಸಲಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದರು.
ಆದರೆ ಮೂರು ವರ್ಷಗಳ ಹಿಂದೆ ಇತ್ತೀಚಿನ ದಶಕಗಳಲ್ಲೇ ಕನ್ಸರ್ವೇಟಿವ್ ಪಕ್ಷದ ಅಭೂತಪೂರ್ವ ವಿಜಯಕ್ಕೆ ಜಾನ್ಸನ್ ಕಾರಣರಾಗಿದ್ದರು. ಆದರೆ ಇದೀಗ ಪಕ್ಷದಲ್ಲಿ ಗಂಭೀರ ಒಡಕು ಸ್ಪಷ್ಟವಾಗಿ ಕಾಣಿಸಿಕೊಂಡಿದೆ. 2018ರ ಡಿಸೆಂಬರ್ ನಲ್ಲಿ ಅಂದಿನ ಪ್ರಧಾನಿ ಥೆರೇಸಾ ಮೇ ಇಂಥದ್ದೇ ಮತದಾನದಲ್ಲಿ ಪಡೆದ ಮತಕ್ಕಿಂತ ಜಾನ್ಸನ್ ಪಡೆದ ಮತಗಳು ಕಡಿಮೆ. ಆರು ತಿಂಗಳ ಬಳಿಕ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದರು.