ಹಸಿರು ಆದ್ಯತೆ ಸೂಚ್ಯಂಕದಲ್ಲಿ ತಳಮಟ್ಟಕ್ಕೆ ಕುಸಿದ ಭಾರತ: ಅಮೆರಿಕ ಮೂಲದ ಸಂಸ್ಥೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜೂ.7: ಅಮೆರಿಕದ ಸಂಸ್ಥೆಗಳು ಪರಿಸರ ಸಾಧನೆಗಾಗಿ ಸಿದ್ಧಪಡಿಸಿರುವ 180 ದೇಶಗಳ ಪಟ್ಟಿಯಲ್ಲಿ ಭಾರತವು ಕನಿಷ್ಠ ಸ್ಥಾನದಲ್ಲಿದೆ.
ಯೇಲ್ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಲಾ ಆ್ಯಂಡ್ ಪಾಲಿಸಿ ಮತ್ತು ಕೋಲಂಬಿಯಾ ವಿವಿಯ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಅರ್ತ್ ಸೈನ್ಸ್ ಇನ್ಫಾರ್ಮೇಷನ್ ನೆಟ್ವರ್ಕ್ ಇತ್ತೀಚಿಗೆ ಪ್ರಕಟಿಸಿರುವ 2022ರ ಪರಿಸರ ಸಾಧನೆ ಸೂಚಿ (ಇಪಿಐ)ಯಲ್ಲಿ ಡೆನ್ಮಾರ್ಕ್ ಅಗ್ರಸ್ಥಾನದಲ್ಲಿದ್ದು, ಬ್ರಿಟನ್ ಮತ್ತು ಫಿನ್ಲ್ಯಾಂಡ್ ನಂತರದ ಸ್ಥಾನಗಳಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಿದ್ದಕ್ಕಾಗಿ ಈ ದೇಶಗಳು ಹೆಚ್ಚಿನ ಅಂಕಗಳನ್ನು ಗಳಿಸಿವೆ.ಇಪಿಐ ವಿಶ್ವಾದ್ಯಂತ ಸುಸ್ಥಿರತೆ ಸ್ಥಿತಿಯ ಕುರಿತು ದತ್ತಾಂಶಗಳನ್ನು ಆಧರಿಸಿದ ಸಾರಾಂಶವನ್ನು ಒದಗಿಸುತ್ತದೆ.ಇಪಿಐ 11 ವಿಷಯ ವರ್ಗಗಳಲ್ಲಿ 40 ಕಾರ್ಯಕ್ಷಮತೆ ಸೂಚಕಗಳನ್ನು ಬಳಸಿಕೊಂಡು ಹವಾಮಾನ ಬದಲಾವಣೆ ನಿರ್ವಹಣೆ,ಪರಿಸರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯ ತಾಳಿಕೆ ಕುರಿತು 180 ದೇಶಗಳಿಗೆ ಶ್ರೇಯಾಂಕಗಳನ್ನು ನೀಡುತ್ತದೆ.
ಭಾರತ (18.9),ಮ್ಯಾನ್ಮಾರ್ (19.4),ವಿಯೆಟ್ನಾಂ (20.1),ಬಾಂಗ್ಲಾದೇಶ (23.1) ಮತ್ತು ಪಾಕಿಸ್ತಾನ (24.6) ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿವೆ. ಕಡಿಮೆ ಅಂಕಗಳನ್ನು ಗಳಿಸಿರುವ ಹೆಚ್ಚಿನ ದೇಶಗಳು ಸುಸ್ಥಿರತೆಗಿಂತ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವ ಅಥವಾ ಸಾಮಾಜಿಕ ಅಶಾಂತಿ ಮತ್ತು ಇತರ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ದೇಶಗಳಾಗಿವೆ . ಹೆಚ್ಚುತ್ತಿರುವ ಅಪಾಯಕಾರಿ ವಾಯು ಗುಣಮಟ್ಟ ಮತ್ತು ತ್ವರಿತವಾಗಿ ಹೆಚ್ಚುತ್ತಿರುವ ಹಸಿರುಮನೆ ಅನಿಲ ಹೊರಸೂಸುವಿಕೆಗಳಿಂದಾಗಿ ಭಾರತವು ಮೊದಲ ಬಾರಿಗೆ ಅತ್ಯಂತ ತಳಮಟ್ಟದ ಸ್ಥಾನದಲ್ಲಿದೆ ಎಂದು ವರದಿಯು ತಿಳಿಸಿದೆ.ಒಟ್ಟಾರೆಯಾಗಿ 28.4ರಷ್ಟು ಇಪಿಐ ಅಂಕಗಳನ್ನು ಗಳಿಸಿರುವ ಚೀನಾ ಪಟ್ಟಿಯಲ್ಲಿ 161ನೇ ಸ್ಥಾನದಲ್ಲಿದೆ.
ಹೊರಸೂಸುವಿಕೆ ಪ್ರಮಾಣವನ್ನು ತಗ್ಗಿಸುವುದಾಗಿ ಚೀನಾ ಮತ್ತು ಭಾರತ ಇತ್ತೀಚಿಗೆ ಭರವಸೆಯನ್ನು ನೀಡಿವೆಯಾದರೂ 2050ರ ವೇಳೆಗೆ ಇವೆರಡೂ ದೇಶಗಳು ಅನುಕ್ರಮವಾಗಿ ಹಸಿರುಮನೆ ಅನಿಲವನ್ನು ಹೊರಸೂಸುವ ಮೊದಲ ಎರಡು ಅಗ್ರರಾಷ್ಟ್ರಗಳಾಗಿ ಹೊರಹೊಮ್ಮಲಿವೆ ಎಂದು ವರದಿಯು ಬಿಂಬಿಸಿದೆ.
ಪಟ್ಟಿಯಲ್ಲಿ 22 ಶ್ರೀಮಂತ ಪಾಶ್ಚಾತ್ಯ ರಾಷ್ಟ್ರಗಳ ಪೈಕಿ 20ನೇ ಸ್ಥಾನದಲ್ಲಿರುವ ಅಮೆರಿಕ ಜಾಗತಿಕವಾಗಿ 43ನೇ ಸ್ಥಾನದಲ್ಲಿದೆ. ರಶ್ಯಾ 112ನೇ ಸ್ಥಾನದಲ್ಲಿದೆ.
ಈಗಿನ ಪ್ರವೃತ್ತಿಯೇ ಮುಂದುವರಿದರೆ 2050ರ ವೇಳೆಗೆ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಚೀನಾ,ಭಾರತ,ಅಮೆರಿಕ ಮತ್ತು ರಶ್ಯಾಗಳ ಪಾಲು ಶೇ.50ಕ್ಕೂ ಹೆಚ್ಚಿರಲಿದೆ ಎಂದು ಇಪಿಐ ವರದಿಯು ಮುನ್ನಂದಾಜಿಸಿದೆ.







