ಕೋಚ್ ಅನುಚಿತ ವರ್ತನೆ ಆರೋಪ : ಮಹಿಳಾ ಸೈಕ್ಲಿಸ್ಟ್ ದೂರು

ಹೊಸದಿಲ್ಲಿ: ಭಾರತದ ಅಗ್ರಗಣ್ಯ ಮಹಿಳಾ ಸೈಕ್ಲಿಸ್ಟ್ ಒಬ್ಬರು, ನ್ಯಾಷನಲ್ ಸ್ಪ್ರಿಂಟ್ ಟೀಮ್‍ನ ಮುಖ್ಯ ಕೋಚ್ ಆರ್.ಕೆ. ಶರ್ಮಾ ವಿರುದ್ಧ 'ಅನುಚಿತ ವರ್ತನೆ'ಯ ಆರೋಪ ಮಾಡಿದ್ದಾರೆ.
ಸ್ಲೊವೇನಿಯಾದಲ್ಲಿ ನಡೆದ ತರಬೇತಿ ಶಿಬಿರದ ವೇಳೆ ಈ ಘಟನೆ ನಡೆದಿದೆ ಎಂದು ಆಪಾದಿಸಲಾಗಿದೆ. ಭಾರತದ ಕ್ರೀಡಾ ಪ್ರಾಧಿಕಾರಕ್ಕೆ ಇ-ಮೇಲ್ ಮೂಲಕ ಈ ಸಂಬಂಧ ದೂರು ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ದೂರು ನೀಡಿದ ಕ್ರೀಡಾಪಟುವನ್ನು ಸುರಕ್ಷತೆ ಖಾತರಿಪಡಿಸುವ ಸಲುವಾಗಿ ತಕ್ಷಣವೇ ಭಾರತಕ್ಕೆ ವಾಪಾಸು ಕರೆಸಲಾಗಿದೆ ಎಂದು ಪ್ರಾಧಿಕಾರದ ಪ್ರಕಟಣೆ ಹೇಳಿದೆ. ಈ ದೂರಿನ ಬಗ್ಗೆ ತನಿಖೆ ನಡೆಸಲು ಕ್ರೀಡಾ ಪ್ರಾಧಿಕಾರ ಹಾಗೂ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿವೆ.
ದೂರು ನೀಡಿದ ಮಹಿಳೆ ಮತ್ತು ಕೋಚ್ ಅನ್ನು ಸಿಎಫ್‍ಐ ಗುರುತಿಸಿದ್ದು, "ನಾವು ದೂರು ನೀಡಿದ ಮಹಿಳೆಯ ಪರ ಇದ್ದೇವೆ" ಎಂದು ಹೇಳಿಕೆ ನೀಡಿದೆ. ಸ್ಲೊವಾನಿಯಾದಲ್ಲಿ ನಡೆದ ಶಿಬಿರದ ವೇಳೆ ಕೋಚ್ ಅನುಚಿತವಾಗಿ ವರ್ತಿಸಿದ ಬಗ್ಗೆ ದೂರು ಬಂದಿದೆ ಎಂದು ಸಾಯ್ ಸ್ಪಷ್ಟಪಡಿಸಿದೆ.
"ದೂರು ಬಂದ ತಕ್ಷಣವೇ ಸಾಯ್, ಅಥ್ಲೀಟ್‍ನ ಸುರಕ್ಷತೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಕೆಯನ್ನು ಕರೆಸಿಕೊಂಡಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನೂ ರಚಿಸಲಾಗಿದೆ. ಈ ಪ್ರಕರಣವನ್ನು ಆದ್ಯತೆಯ ಮೇಲೆ ಪರಿಗಣಿಸಲಾಗಿದ್ದು, ಶೀಘ್ರವೇ ಇತ್ಯರ್ಥಪಡಿಸಲಾಗುವುದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.