ತಮ್ಮ ಮಹಾನಾಯಕನ ಸೂಚನೆಯನ್ನು ಆರೆಸ್ಸೆಸ್ ಹಿಂಬಾಲಕರು ಈಗ ಪಾಲಿಸುತ್ತಾರೆಯೇ?

ಎರಡು ಸುದ್ದಿಗಳು..
ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವುದು ಬೇಡ. ಆ ಹೋರಾಟದಲ್ಲಿ ಆರೆಸ್ಸೆಸ್ ಇಲ್ಲ: ಮೋಹನ್ ಭಾಗವತ್.
ಮುಹಮ್ಮದ್ ಪೈಗಂಬರ್‌ರನ್ನು ಅವಮಾನಿಸಿದ, ಬಿಜೆಪಿಯ ಓರ್ವ ವಕ್ತಾರೆ ಅಮಾನತು, ಓರ್ವ ವಕ್ತಾರ ಉಚ್ಚಾಟನೆ.
ಅಯೋಧ್ಯೆ ರಾಮಮಂದಿರದ ನಂತರ ಕಾಶಿ ಜ್ಞಾನವಾಪಿ ಮಸೀದಿ, ಮಥುರಾ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂಬ ಕೂಗು ಇತ್ತು. ನಂತರ ಅದು ತಾಜ್‌ಮಹಲ್, ಕುತುಬ್ ಮಿನಾರ್‌ನಂತಹ ಜಾಗತಿಕ ಪ್ರಸಿದ್ಧ ಸ್ಥಳವೂ ಸೇರಿ, ಶ್ರೀರಂಗ ಪಟ್ಟಣ, ಮಂಗಳೂರು ಬಳಿ ಮಳಲಿ ಮಸೀದಿ ಸೇರಿದಂತೆ ದೇಶದ ಹಲವೆಡೆ ಮಸೀದಿ ದೇವಸ್ಥಾನವಾಗಿತ್ತು, ಅದರ ಸರ್ವೇ ಆಗಲಿ ಎಂಬ ಕೂಗು ವ್ಯಾಪಿಸಿತು. ಇದೀಗ ಆರೆಸ್ಸೆಸ್‌ನ ಸುಪ್ರೀಂ ಮೋಹನ್ ಭಾಗವತ್ ಸ್ಪಷ್ಟವಾಗಿ, ಪ್ರತೀ ಮಸೀದಿಯಲ್ಲೂ ಹಿಂದೂ ದೇವರನ್ನು ಹುಡುಕುವ ಹೋರಾಟದಲ್ಲಿ ನಾವಿಲ್ಲ. ಇತಿಹಾಸದ ತಪ್ಪುಗಳನ್ನು ನಾವೂ ಮಾಡಿದ್ದಲ್ಲ, ಮುಸ್ಲಿಮರೂ ಮಾಡಿದ್ದಲ್ಲ . ಒಂದೆರಡು ಪ್ರಮುಖ ಕ್ಷೇತ್ರದ ಕುರಿತು ಸೌಹಾರ್ದದಿಂದ ಬಗೆಹರಿಸಿಕೊಳ್ಳಬೇಕು. ಉಳಿದಂತೆ ಹೋರಾಟಕ್ಕೆ ನಾವಿಲ್ಲವೆಂದು ಹೇಳಿಬಿಟ್ಟಿದ್ದಾರೆ.
ಆರೆಸ್ಸೆಸ್‌ನಲ್ಲಿ ಒಂದಿಷ್ಟು ನಿಯಮವಿದೆ. ಅದರಲ್ಲಿ ಒಂದು ‘ಸೂಚನೆ’ ಅಂದರೆ ಸಂಘದ ಸ್ವಯಂ ಸೇವಕರಿಗೆ ಮೇಲಿನಿಂದ ಬರುವ ಸೂಚನೆ ಪಾಲಿಸುವುದು ಕಡ್ಡಾಯ. ಅದನ್ನು ಪ್ರಶ್ನಿಸುವಂತಿಲ್ಲ, ಉಲ್ಲಂಘಿಸುವಂತಿಲ್ಲ. ಹಾಗೆ ಮಾಡಿದವರನ್ನು ಉಪೇಕ್ಷೆ ಮಾಡುವ ಮೂಲಕ ನಿರ್ಲಕ್ಷ ಮಾಡುತ್ತಾರೆ. ಯಾವುದೇ ಜವಾಬ್ದಾರಿ ಕೊಡುವುದಿಲ್ಲ. ತನ್ನಿಂದ ತಾನೇ ಆತ ಮೂಲೆಗೆ ಸರಿಯಬೇಕಾದ ಪರಿಸ್ಥಿತಿ.
ಈಗ ಸಂಘದ ಸಂಯೋಜನೆಯಲ್ಲಿ (ಸಹ ಸಂಘಟನೆಗಳು) ಅನೇಕ ಸಂಘಟನೆಗಳಿವೆ. ವಿಎಚ್‌ಪಿ, ಬಿಜೆಪಿ, ಅಭಾವಿಪ, ಬಜರಂಗದಳ, ದುರ್ಗಾವಾಹಿನಿ ಇತ್ಯಾದಿ.(ರಾಮ ಸೇನೆ, ಹಿಂದೂ ಮಹಾಸಭಾ ಇದರ ಒಳಗಿರದ ಸ್ವತಂತ್ರ ಸಂಘಟನೆಗಳು. ಆದರೂ ಅವರು ಆರೆಸ್ಸೆಸ್‌ನ್ನು ವಿರೋಧಿಸುವುದಿಲ್ಲ)
ಈ ಸಹ ಸಂಘಟನೆಗಳು ಸರ ಸಂಘಚಾಲಕರ ಸೂಚನೆಯನ್ನು ಬೈಠಕ್‌ಗಳ ಮೂಲಕ ಪ್ರತೀ ಕಾರ್ಯಕರ್ತರಿಗೆ ತಲುಪಿಸಲೇಬೇಕು. ಅದು ಅನುಶಾಸನದ ನೆಲೆಗಟ್ಟಿನಲ್ಲಿ.
(ನಾನು ಇರುವಾಗ ಈ ಪದ್ಧತಿ ಇತ್ತು. ಇವೆಲ್ಲಾ ಬದಲಾಗಿರಲಿಕ್ಕಿಲ್ಲವೆಂದು ಭಾವಿಸಿದ್ದೇನೆ)
ಈಗ ಮೋಹನ್ ಭಾಗವತರ ಮಾತನ್ನು ಪ್ರತಿಯೊಬ್ಬ ಸ್ವಯಂಸೇವಕ ಕಡ್ಡಾಯ ಪಾಲಿಸಲೇಬೇಕು. ಆತ ಬಿಜೆಪಿಯಲ್ಲಿರಲಿ ಬಜರಂಗದಳದಲ್ಲಿರಲಿ. ಆತ ತಾನು ಆರೆಸ್ಸೆಸ್ ಅಲ್ಲ ಕೇವಲ ಬಿಜೆಪಿ ಅಥವಾ ಅಭಾವಿಪ ಎಂದು ಹೇಳಿಕೊಳ್ಳಬಹುದು. ಆಗ ಆತನ ನಿಲುವು ಸಂಘದ್ದು ಆಗಿರುವುದಿಲ್ಲ. ಅದಕ್ಕೆ ಬೆಲೆಯೂ ಇಲ್ಲ. ಸಂಘದ ಹೆಸರು ದುರುಪಯೋಗ ಮಾಡಿಕೊಂಡರೆ ಸಂಘದವರು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಅದರ ಬಹುತೇಕ ನಾಯಕರು ತಾವು ಆರೆಸ್ಸೆಸ್ ಎಂದೇ ಹೇಳುವುದು. (ಶಾಖೆಗೆ ಹೋಗದವರೂ ಹಾಗೇ ಹೇಳಿಕೊಳ್ಳುತ್ತಿರುವುದೂ ಇದೆ.)
ಈಶ್ವರಪ್ಪ‘‘ಹೌದ್ರೀ. ಸಂಘದ ಆದೇಶದಂತೆ ನಾವು ನಡೆಯುವುದು... ಏನೀಗ’’ ಎಂದು ವಿಧಾನ ಸೌಧದಲ್ಲೇ ಗುಡುಗಿ ಅದು ದಾಖಲಾಗಿದೆ. ಸಿ.ಟಿ. ರವಿ, ಯತ್ನಾಳ್, ಅಶೋಕ್, ನಳಿನ್ ಇತ್ಯಾದಿ ನಾಯಕರು ತಾವು ಆರೆಸ್ಸೆಸ್ ಎಂದೇ ಹೇಳುವುದು. ಅದು ನಿಜ ಕೂಡಾ. ಆರೆಸ್ಸೆಸ್‌ನ ಕೆಳ ಹಂತದಿಂದ ರಾಷ್ಟ್ರ ಮಟ್ಟದವರೆಗೆ ನಿರಂತರವಾಗಿ ಪರಿವಾರದ ಬೈಠಕ್ ನಡೆಯುತ್ತದೆ. ಅಲ್ಲಿ ಕೆಲವು ವಿಷಯಗಳಲ್ಲಿ ಅಭಿಪ್ರಾಯ ಕ್ರೋಡೀಕರಿಸಿ ಬೈಠಕ್ ಆಗುತ್ತದೆ. ಏಕ ಅಭಿಪ್ರಾಯ ಘೋಷಣೆಯಾಗುತ್ತದೆ. ಜಿಲ್ಲಾಮಟ್ಟದಿಂದ ರಾಷ್ಟ್ರ ಮಟ್ಟದತನಕ ಆರೆಸ್ಸೆಸ್‌ನ ಓರ್ವ ವ್ಯಕ್ತಿಯನ್ನು ಸಂಘಟನಾ ಕಾರ್ಯದರ್ಶಿ ಎಂದು ಬಿಜೆಪಿಗೆ ನೀಡಲಾಗುತ್ತದೆ. ಆತ ಸಂಘ ಮತ್ತು ಬಿಜೆಪಿ ನಡುವೆ ಕೋ-ಆರ್ಡಿನೇಟರ್ ಆಗಿ ಕಾರ್ಯ ನಿರ್ವಹಿಸುತ್ತಾನೆ. ಬಿಜೆಪಿಗೆ ಸಂಘ ಕೇವಲ ಸಲಹೆ ಕೊಡುವುದಲ್ಲ, ಆದೇಶ ಅಥವಾ ಸೂಚನೆಯನ್ನೂ ಕೊಡುತ್ತದೆ. ಅಲ್ಲಿಗೆ ಸಂಘ ಪಕ್ಷ ರಾಜಕಾರಣದಲ್ಲಿ ನೇರ ಪಾತ್ರ ವಹಿಸುತ್ತದೆ. ಸಂಘ ಒಂದು ಸಂಘಟನೆಯಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಅದು ಸಾರ್ವಜನಿಕವಾಗಿ ತನ್ನನ್ನು ತಾನು ತೆರೆದುಕೊಂಡಿದೆ. ಹೀಗಿರುವಾಗ ನೀವು ಸಂಘದ ವಿಮರ್ಶೆ ಮಾಡಬಾರದು, ಪ್ರಶ್ನೆ ಕೇಳಬಾರದು ಅನ್ನುವುದು ಸರಿಯಲ್ಲ. ಅದು ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರೀಯತೆಯನ್ನು ಬೆಳೆಸುವ ಪಾರದರ್ಶಕ ಸಂಸ್ಥೆ ಎಂದು ಘೋಷಣೆ ಮಾಡಿಕೊಂಡಿರುವಾಗ ಮತ್ತು ದಿನನಿತ್ಯ ಒಂದಿಲ್ಲ ಒಂದು ದೇಶದ ಸಾರ್ವಜನಿಕ ಬದುಕಿನ ಸಂಗತಿಗಳಲ್ಲಿ ಪಾಲ್ಗೊಳ್ಳುವಾಗ ಅದರ ಕುರಿತು ಚರ್ಚೆ ತೀರಾ ಸಹಜ ಪ್ರತಿಕ್ರಿಯೆ ಆಗಿದೆ.
ಸಂಘದಿಂದಲೇ ಬಂದ ಮತ್ತು ಖಡಕ್ಕಾಗಿ ಹಾಗೇ ಹೇಳಿಕೊಳ್ಳುವ ಮಂತ್ರಿಗಳ ಭ್ರಷ್ಟಾಚಾರ ಅಥವಾ ಯಾವುದಾರೂ ತಪ್ಪುಆದಾಗ ಅದು ವೈಯಕ್ತಿಕ ಎಂದು ಹೇಳಿ ಮುಗಿಸಲಾಗದು. ಅದು ಸಂಘದ ಪ್ರೊಡಕ್ಟ್. ಕಾಂಗ್ರೆಸ್ ಕಮ್ಯುನಿಸ್ಟ್‌ನ ಪ್ರೊಡಕ್ಟ್‌ಗಳು ಸರಿ ಇಲ್ಲದಿದ್ದರೆ ಹೇಗೆ ಉತ್ತರದಾಯಿತ್ವವಾಗುತ್ತದೋ ಹಾಗೆ ಸಂಘವೂ ಉತ್ತರದಾಯಿತ್ವವಾಗುತ್ತದೆ.
ನಾವು ಸಂಘಕ್ಕೆ ಹೋಗುತ್ತಿದ್ದಾಗ, ನೀವು ಯಾವ ಪಕ್ಷಕ್ಕೆ ಬೇಕಾದರೂ ಹೋಗಿ, ಒಳ್ಳೆಯವರಾಗಿರಿ, ರಾಷ್ಟ್ರೀಯವಾದಿಗಳಾಗಿರಿ ಅಂತಿತ್ತು. 1989 ರ ನಂತರ ಅದು ಹಿಂದುತ್ವ ಆಧರಿತ ಬಿಜೆಪಿಯನ್ನು ಬೆಂಬಲಿಸಿತು. ಈಗ ಸಂಘದವರು ನೇರ ಬಿಜೆಪಿಯೇ ಆಗಿರಬೇಕು ಅನ್ನುವ ಅಲಿಖಿತ ನಿಯಮ ಬಂದಾಗಿದೆ. ಹಾಗಾಗಿ ಬಿಜೆಪಿ ಅಂದರೆ ಸಂಘ. ಸಂಘದವರು ಬಿಜೆಪಿಯಾಗಿದೆ. ಇಲ್ಲಿ ರಾಜಕೀಯವಾಗಿ ಬೇರೆ ಪಕ್ಷದ ಪ್ರವೇಶವಾಗುವುದಿಲ್ಲ. ಬಿಜೆಪಿ ಪ್ರಮುಖ ನಾಯಕ ತಾನು ಆರೆಸ್ಸೆಸ್‌ಎಂದು ಪದೇ ಪದೇ ಹೇಳುತ್ತ, ರಾಜಕಾರಣದಲ್ಲಿ ಮಾತನಾಡುವಾಗ ಅದು ಆರೆಸ್ಸೆಸ್ ಹೊರತುಪಡಿಸಿ ಅನ್ನುವುದು ಕಷ್ಟಸಾಧ್ಯ.
ಈಗ ಬಿಜೆಪಿ ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದೆ ಎಂದು ವಕ್ತಾರರನ್ನು ತೆಗೆದಿದೆ. ಭಾಗವತ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ತಾವು ಆರೆಸ್ಸೆಸ್ ಎಂದು ಹೇಳಿಕೊಳ್ಳುವ ಸ್ವಯಂ ಸೇವಕ ಬಿಜೆಪಿ ಅಥವಾ ಬಜರಂಗದಳ ಅಥವಾ ಜಾಗರಣಾ ವೇದಿಕೆ ಎಲ್ಲೇ ಇರಲಿ ಆತ ಇನ್ನು ಮುಂದೆ ಹೊಸ ಹೊಸ ಮಸೀದಿಯಲ್ಲಿ ದೇವರನ್ನು ಹುಡುಕುವ, ಇಸ್ಲಾಮ್ ಧರ್ಮದ ಅವಹೇಳನ ಮಾಡುವಂತಿಲ್ಲ. ಹಾಗೆ ಮಾಡುವುದು ಮಾತೃ ದ್ರೋಹವಾಗುತ್ತದೆ. ಪರಿವಾರದಲ್ಲಿರದ ಆದರೆ ಆರೆಸ್ಸೆಸ್ ತನ್ನ ತಾಯಿ ಅನ್ನುವ ಮುತಾಲಿಕ್‌ರಂತಹವರೂ ತಮ್ಮ ನಿಲುವು ಬದಲಿಸಬೇಕು ಅಥವಾ ಆರೆಸ್ಸೆಸ್‌ಗೆ ವಿರುದ್ಧ ನಿಲ್ಲಬೇಕು.
ಜಗತ್ತಿನ ಹಳೆಯ ಇತಿಹಾಸ ಯುದ್ಧ ಯುಗ. ಹಿಂದೂಗಳ ಮೇಲೆ ಮೊಗಲರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು, ಗ್ರೀಕರು ಹೀಗೆ ಹಲವರ ಆಕ್ರಮಣವಾಗಿವೆ. ಹಿಂದೂ ರಾಜರ ಮೇಲೆ ಹಿಂದೂ ರಾಜರು, ಮುಸ್ಲಿಮ್ ರಾಜರ ಮೇಲೆ ಮುಸ್ಲಿಮ್ ರಾಜರು, ಬೌದ್ಧರ ಮೇಲೆ ಹಿಂದೂಗಳು, ಜೈನರ ಮೇಲೆ ಹಿಂದೂಗಳು, ಹಿಂದೂಗಳ ಮೇಲೆ ಬೌದ್ಧರು ಹೀಗೆ ಯಾವುದೂ ಆಗಿಲ್ಲ ಅನ್ನುವಂತಿಲ್ಲ. ಅನೇಕ ದೇಶಗಳ ಇತಿಹಾಸವೂ ಇದೇ ರೀತಿ. ನಮ್ಮದು ಮಾತ್ರವಲ್ಲ. ಯಾಕೆಂದರೆ ಅದು ಯುದ್ಧ ಯಗ.
ಹಾಗಾಗಿ ಭಾಗವತ್ ಅವರ ನಿರ್ಧಾರ ಸರಿ. ಅದನ್ನು ಜಾರಿಗೆ ತರಬೇಕಾದುದು ಮತ್ತು ಸಂಘದವರಲ್ಲದಿದ್ದರೂ ಸಂಘದ ಹೆಸರು ಹೇಳಿ, ಹಾದಿ ಬೀದಿಯಲ್ಲಿ ಹಿಂದುತ್ವದ ಪರ ಗಲಾಟೆ ಮಾಡುವವರನ್ನು ನಿಯಂತ್ರಣ ಮಾಡಬೇಕಾದುದೂ ಅವರೇ. ಯಾಕೆಂದರೆ ಅವರದೇ ಸರಕಾರ ಈಗ ಇರುವುದು.
ಹಳೆಯದನ್ನೆಲ್ಲ, ಈಗ ಸರಿ ಮಾಡುತ್ತೇವೆ. ಭಾರತದ 30 ಸಾವಿರ ಮಸೀದಿ ಒಳಗಡೆ ಹುಡುಕುತ್ತೇವೆ, ಬೌದ್ಧರ ಸ್ತೂಪಗಳು, ಜೈನರ ಬಸದಿಗಳು ದೇವಸ್ಥಾನಗಳಾಗಿವೆೆ ಅವನ್ನೂ ಅಗೆದು ನೋಡುತ್ತೇವೆ ಎನ್ನುವುದು ಹೊಸ ಜಗತ್ತಿನಲ್ಲಿ ಅಸಾಧ್ಯವಾದುದು. ಇಂದಿನ ಜಗತ್ತು ಪರಸ್ಪರ ತಳಕು ಹಾಕಿಕೊಂಡಾಗಿದೆ. ಒಬ್ಬರನ್ನೊಬ್ಬರು ಬಿಟ್ಟು ಬದುಕದ ನಿಸರ್ಗ ನಿಯಮವೊಂದು ನಮ್ಮನ್ನು ಆವರಿಸಿಯಾಗಿದೆ. ಅದಕ್ಕೆ ಬಿಜೆಪಿ ವಕ್ತಾರರು ಹುದ್ದೆ ಕಳೆದುಕೊಂಡದ್ದು. ಮುಸ್ಲಿಮ್ ವ್ಯಾಪಾರಿಯೊಂದಿಗೆ ಕೋಟ್ಯಂತರ ವ್ಯವಹಾರ ಕುದುರಿಸಿದ ಮೋದಿ ಸರಕಾರ, ಏಕಾಏಕಿ ಇಸ್ಲಾಮ್ ಧರ್ಮ ಅವಹೇಳನ ಆಗುವಾಗ ಮೌನಕ್ಕೆ ಸರಿಯುವಂತಿಲ್ಲ.
ಮುಸ್ಲಿಮ್ ರಾಷ್ಟ್ರಗಳಲ್ಲಿ ನಮ್ಮವರ ವರ್ತನೆಗಳನ್ನು ಗಂಭೀರವಾಗಿಸಿ, ಅಲ್ಲಿಯೂ ವ್ಯಾಪಾರ ವಹಿವಾಟು ಬಹಿಷ್ಕಾರ, ಭಾರತೀಯ ಉದ್ಯೋಗಿಗಳನ್ನು ಕೈಬಿಡುವ ಚಿಂತನೆ ಜೋರಾಗಿದೆ. ನಾವು ಸಾಮೂಹಿಕವಾಗಿ ಮಸೀದಿ ಅಗೆದರೆ, ನಿಮ್ಮ ದೇವಸ್ಥಾನದಲ್ಲಿ ಬಸದಿಯಿದೆ, ಬೌದ್ಧ ವಿಹಾರವಿದೆ, ಶೈವ-ವೈಷ್ಣವ, ಹನುಮನ ಹುಟ್ಟು ಹೀಗೆ ಪಟ್ಟಿ ಬೆಳೆದರೆ ದೇಶ ಛಿದ್ರವಾಗುತ್ತದೆ. ಹಾಗೆ ಆಗಬಾರದು ಅನ್ನುವುದು ರಾಷ್ಟ್ರೀಯವಾದ. ಇತಿಹಾಸ ಬೇಕು ನಿಜ. ಆದರೆ ಭೌತಿಕವಾಗಿ ಇತಿಹಾಸವನ್ನು ತಿದ್ದುವುದೇ ವರ್ತಮಾನವಾದರೆ ಭವಿಷ್ಯ ಭಯಾನಕವಾಗುತ್ತದೆ. ಯಾಕೆಂದರೆ ಇತಿಹಾಸ ಬಹುತೇಕ ಯುದ್ಧಯಗವಾಗಿತ್ತು. ಅದಕ್ಕೆ ವರ್ತಮಾನದ ನಾವು ಯಾರೂ ಉತ್ತರದಾಯಿಯೂ ಅಲ್ಲ, ಜವಾಬ್ದಾರಿಯೂ ಅಲ್ಲ. ನಾವು ಭವಿಷ್ಯದ ಸುಂದರ ಚಿತ್ರವೊಂದಕ್ಕೆ ನಕ್ಷೆ ಬರೆದು ಬರುವ ನಾಳೆಗೆ ಅದನ್ನು ಕಟ್ಟಿಕೊಡುವುದೇ ವರ್ತಮಾನವಾಗಬೇಕು. ನಮ್ಮ ವರ್ತಮಾನವೇ ನಾಳೆಗೆ ಇತಿಹಾಸ. ಹಳೆಯ ದನ್ನು ಬಿಟ್ಟು, ಹೊಸತನ್ನು ಕಟ್ಟುವ. ನಮ್ಮ ಮುಂದಿನ ಪೀಳಿಗೆ ನಮ್ಮ ಇತಿಹಾಸವನ್ನು ಕಣ್ಣರಳಿಸಿ ವಾವ್...ಎಂಬ ಉದ್ಗಾರ ತೆಗೆಯುವಂತೆ ಮಾಡೋಣ.







