ಎಲ್ಲಾ ಧರ್ಮಗಳ ಕುರಿತು ಗೌರವ, ಸಹಿಷ್ಣುತೆ ಹೊಂದಲು ಮನವಿ ಮಾಡುತ್ತೇವೆ: ಪ್ರವಾದಿ ನಿಂದನೆ ಕುರಿತು ವಿಶ್ವಸಂಸ್ಥೆ ವಕ್ತಾರ

ವಿಶ್ವಸಂಸ್ಥೆ, ಜೂ.7: ಪ್ರವಾದಿ ಮುಹಮ್ಮದ್ ರ ಬಗ್ಗೆ ಬಿಜೆಪಿ ಮುಖಂಡರ ಹೇಳಿಕೆಗೆ ಹಲವು ಮುಸ್ಲಿಮ್ ದೇಶಗಳಿಂದ ತೀವ್ರ ಖಂಡನೆ ವ್ಯಕ್ತವಾಗಿರುವಂತೆಯೇ, ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ವಕ್ತಾರರು, ಎಲ್ಲಾ ಧರ್ಮಗಳಿಗೆ ಗೌರವ ಮತ್ತು ಸಹಿಷ್ಣುತೆಯನ್ನು ಬಲವಾಗಿ ಪ್ರೋತ್ಸಾಹಿಸುವುದಾಗಿ ಹೇಳಿದ್ದಾರೆ.
ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ ಹಾಗೂ ದಿಲ್ಲಿ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಪ್ರವಾದಿಯವರ ಬಗ್ಗೆ ನೀಡಿದ ಹೇಳಿಕೆಯನ್ನು ಹಲವಾರು ಮುಸ್ಲಿಮ್ ದೇಶಗಳು ಖಂಡಿಸಿರುವುದನ್ನು ಉಲ್ಲೇಖಿಸಿ ಪಾಕಿಸ್ತಾನದ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ನಾವು ಹೇಳಿಕೆಯನ್ನು ಗಮನಿಸಿಲ್ಲ. ಆದರೆ ಈ ಕುರಿತ ಬೆಳವಣಿಗೆಯನ್ನು ಗಮನಿಸಿದ್ದೇವೆ. ಎಲ್ಲಾ ಧರ್ಮಗಳಿಗೆ ಗೌರವ ಮತ್ತು ಸಹಿಷ್ಣುತೆಯನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ವಕ್ತಾರ ಸ್ಟೀಫನ್ ಡ್ಯುಜರಿಕ್ ಸೋಮವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಮುಸ್ಲಿಮ್ ಸಂಘಟನೆಗಳ ಪ್ರತಿಭಟನೆ ಹಾಗೂ ಮುಸ್ಲಿಂ ದೇಶಗಳ ತೀವ್ರ ಖಂಡನೆಯ ಬೆನ್ನಲ್ಲೇ ಬಿಜೆಪಿಯು ಶರ್ಮರನ್ನು ಅಮಾನತುಗೊಳಿಸಿದೆ ಹಾಗೂ ಜಿಂದಾಲ್‌ರನ್ನು ಉಚ್ಚಾಟಿಸಿದೆ. ಕುವೈಟ್, ಖತರ್, ಇರಾನ್, ಇಂಡೊನೇಶ್ಯಾ, ಸೌದಿ ಅರೆಬಿಯಾ, ಯುಎಇ, ಜೋರ್ಡನ್, ಬಹ್ರೇನ್, ಪಾಕಿಸ್ತಾನ, ಅಫ್ಘಾನಿಸ್ತಾನ ಮಾಲ್ದೀವ್ಸ್ ಮತ್ತಿತರ ದೇಶಗಳಿಂದ ತೀವ್ರ ಖಂಡನೆ ವ್ಯಕ್ತವಾಗಿರುವಂತೆಯೇ ಹೇಳಿಕೆ ಬಿಡುಗಡೆಗೊಳಿಸಿರುವ ಬಿಜೆಪಿ, ತಾನು ಎಲ್ಲಾ ಧರ್ಮವನ್ನೂ ಗೌರವಿಸುವುದಾಗಿ ಹಾಗೂ ಯಾವುದೇ ಧಾರ್ಮಿಕ ವ್ಯಕ್ತಿತ್ವದ ಅವಮಾನವನ್ನು ಬಲವಾಗಿ ಖಂಡಿಸುವುದಾಗಿ ಹೇಳಿದೆ.