ರಾಜ್ಯಸಭೆ ಚುನಾವಣೆ; ಜೆಡಿಎಸ್ ಅಭ್ಯರ್ಥಿ ನಿವೃತ್ತಿಗೊಳಿಸುವ ಪ್ರಶ್ನೆಯೇ ಇಲ್ಲ: ಕುಮಾರಸ್ವಾಮಿ ತಿರುಗೇಟು

ಮೈಸೂರು: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿವೃತ್ತಿಗೊಳಿಸುವ ಪ್ರಶ್ನೆಯೇ ಇಲ್ಲ, ಕೋಮುವಾದಿಗಳನ್ನು ದೂರ ಇಡಬೇಕು ಎಂಬ ಇಚ್ಚೆ ಕಾಂಗ್ರೆಸ್ ನವರಿಗಿದ್ದರೆ ತಮ್ಮ ಬಳಿ ಇರುವ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಿ, ನಮ್ಮ ಬಳಿ ಇರುವ 32 ಮತಗಳ ಎರಡನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುತ್ತೇವೆ ಎಂದು ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಜೆಡಿಎಸ್ ನಿಂದ ಅಭ್ಯರ್ಥಿ ಹಾಕುವುದಕ್ಕೂ ಮುನ್ನ ಎಚ್.ಡಿ.ದೇವೇಗೌಡರು ಸೋನಿಯಾಗಾಂದಿ ಜನನ ಜೊತೆ ಮಾತುಕತೆ ನಡೆಸಿದ್ದರು. ಆದರೆ ಸಿದ್ದರಾಮಯ್ಯ ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲ್ಲಿಸಲು ಕಾಂಗ್ರೆಸ್ ನಿಂದ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿದರು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯನ್ನು ಸೋಲಿಸಲೇ ಬೇಕು ಎಂಬ ಉದ್ದೇಶ ಕಾಂಗ್ರೆಸ್ ನವರಿಗೆ ಇದ್ದಿದ್ದರೆ ಈ ಮೊದಲೇ ನಮ್ಮ ಬಳಿ ಮಾತನಾಡಬಹುದಿತ್ತು, ನಮಗೆ ಮುಂಚೆಯೇ ಒಂದು ಮನವಿ ಮಾಡಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡದೆ ಎರಡನೇ ಅಭ್ಯರ್ಥಿ ನಿಲ್ಲಿಸಿ ಬಿಜೆಪಿ ಮೂರನೇ ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತುದ್ದಾರೆ. ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರಿಗೆ ಬೆಂಬಲ ನೀಡಿದ್ದೇವೆ ಎಂದಿದ್ದಾರೆ. ಆದರೆ ಇದೂವರೆಗೂ ನಾವು ಗೆದ್ದಿದ್ದಕ್ಕಿಂತ ಸೋತಿರುವುದೇ ಹೆಚ್ಚು ಎಂದು ಹೇಳಿದರು.
ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್ ನವರಿಗೆ ಅಷ್ಟೊಂದು ಕಾಳಜಿದಿದ್ದರೆ ಮನ್ಸೂರ್ ಅಲಿಖಾನ್ ಅವರನ್ನು ಮೊದಲನೇ ಅಭ್ಯರ್ಥಿಯನ್ನಾಗಿ ಮಾಡಬೇಕಿತ್ತು, ಅವರನ್ನು ಏಕೆ ಎರಡನೇ ಅಭ್ಯರ್ಥಿ ಮಾಡಿದಿರಿ? ಕಾಂಗ್ರೆಸ್ ನ ಮೊದಲ ಅಭ್ಯರ್ಥಿಯಿಂದ ಈ ರಾಜ್ಯಕ್ಕೆ ಏನು ಕೊಡುಗೆ ಸಿಕ್ಕಿದೆ ಎಂದು ಪ್ರಶ್ನಿಸಿದರು.
ಜೆಡಿಎಸ್ ಮತ್ತು ಬಿಜೆಪಿಯ ಅತ್ಮಸಾಕ್ಷಿ ಮತಗಳು ನಮಗೆ ಬರುತ್ತವೆ ಎಂದು ಹೇಳುವ ಸಿದ್ದರಾಮಯ್ಯ ಅವರು ಮೊದಲು ಇವರಿಗೆ ಆತ್ಮಸಾಕ್ಷಿದಿಯೇ ಎಂದು ಪ್ರಶ್ನೆ ಮಾಡಿಕೊಳ್ಳಲಿ 2008 ರಲ್ಲಿ ಎಡಿಯೂರಪ್ಪ ಅವರ ಜೊತೆ ಮಾತನಾಡಿ ಮೈತ್ರಿ ಸರ್ಕಾರ ಬೀಳಲು ಹೇಗೆ ಕಾರಣರಾದರು. ಮತ್ತು ಈಗ ಮೈತ್ರಿ ಸರ್ಕಾರ ಬೀಳಿಸಲು ಏನೇನು ತಂತ್ರಗಾರಿಕೆ ಮಾಡಿದರು ಎಂಬ ಆತ್ಮಸಾಕ್ಷಿಯನ್ನು ಅವರು ಬಹಿರಂಗಪಡಿಸಯವುದು ಬೇಡ ಮನಸ್ಸಿನಲ್ಲಿಯೇ ಕೇಳಿಕೊಳ್ಳಲಿ ಎಂದು ಹರಿಹಾಯ್ದರು.
ನಾನು ಮುಖ್ಯಮಂತ್ರಿಯಾದ ಮೊದಲದಿನದಿಂದಲೇ ಸಿದ್ದರಾಮಯ್ಯ ನನ್ನ ವಿರುದ್ಧ ಕತ್ತಿ ಮಸೆಯಲು ಪ್ರಾರಂಭ ಮಾಡಿದರು. ನನ್ನ ಅಧಿಕಾರದಿಂದ ಕೆಳಗಿಳಸಬೇಕು ಎಂದು ಹಲವು ಹಿಂಸೆ ನೀಡಿದರು. ಆದೃ ನಾನು ಅದನ್ನೆಲ್ಲಾ ಸಹಿಸಿಕೊಂಡೆ.ಕಾರಣ ರೈತರ ಸಾಲ ಮನ್ನಾ ಮಾಡುವ ಉದ್ದೇಶ. ಹಾಗಾಹಿಯೇ ರೈತರ ಸಾಲ ಮನ್ನಾ ಮಾಡಿದ ನಂತರವೇ ಅಧಿಕಾರದಿಂದ ಕೆಳಗಿಳಿದೆ.
ನಿನ್ನೆ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಭೇಟಿಯಾಗಿ ಮಾತನಾಡುತ್ತಿರುವ ಫೋಟೋ ಬಿಟ್ಟವರು ಯಾತು? ಈ ಫೋಟೋ ಬಿಟ್ಟ ಉದ್ದೇಶ ಏನು? ಅದು ವಿ.ಐ.ಪಿ ರೂಮ್ ಅಲ್ಲಿಗೆ ಹೋಗಲು ಮಾಧ್ಯಮದವರಿಗೂ ಅವಕಾಶ ಇಲ್ಲ, ಅಂತಹದರಲ್ಲಿ ಅವರೇ ಅವರ ಕಡೆಯವರ ಮೂಲಕ ಫೋಟೋ ತೆಗೆಸಿ ಬಿಡುಗಡೆ ಮಾಡಿಸಿದ್ದಾರೆ.ಇದರ ಉದ್ದೇಶವನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಚಡ್ಡಿ ವಿಚಾರ ಗೊಂದಲ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಚಡ್ಡಿಯೊಳಗೆ ಏನೂ ಇಲ್ಲ, ಇಬ್ಬರ ಜಗಳದಲ್ಲಿ ಚಡ್ಡಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ರೈತರ ಸಂಕೇತ ಚಡ್ಡಿ, ಆ ಚಡ್ಡಿಯ ಬಗ್ಗೆ ಹಗುರವಾಗಿ ಮಾತನಾಡಬಾರದು. ಚಡ್ಡಿ ಹಾಕಿ ಕೇಶವ ಕೃಪದಲ್ಲಿ ದೇಶವನ್ನು ಹಾಳು ಮಾಡುವ ಕೆಲಸವನ್ನು ಮಾಡುತ್ತಿರುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.







