ಹೈದರಾಬಾದ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಫೋಟೋ ಹಂಚಿಕೊಂಡಿದ್ದ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ

ಎಂ. ರಘುನಂದನ್ ರಾವ್, Photo:twitter
ಹೈದರಾಬಾದ್,ಜೂ.7: ನಗರದಲ್ಲಿ ಇತ್ತೀಚಿಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯ ಕೆಲವು ಚಿತ್ರಗಳು ಮತ್ತು ವೀಡಿಯೊವನ್ನು ಬಿಡುಗಡೆಗೊಳಿಸಿದ್ದಕ್ಕಾಗಿ ಬಿಜೆಪಿ ಶಾಸಕ ಎಂ.ರಘುನಂದನ ರಾವ್ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಚಿತ್ರಗಳು ಮತ್ತು ವೀಡಿಯೊ ತುಣುಕನ್ನು ಹಂಚಿಕೊಳ್ಳುವ ಮೂಲಕ ಅಪ್ರಾಪ್ತ ವಯಸ್ಕ ಬಾಲಕಿಯ ಗುರುತನ್ನು ಬಹಿರಂಗಗೊಳಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ದೂರಿನ ಆಧಾರದಲ್ಲಿ ರಾವ್ ವಿರುದ್ಧ ಐಪಿಸಿಯ 228-ಎ ಕಲಮ್ನಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.
ವೀಡಿಯೊದಲ್ಲಿರುವ ಯುವಕ ಎಐಎಂಐಎಂ ಶಾಸಕರ ಪುತ್ರನಾಗಿದ್ದಾನೆ ಎಂದು ರಾವ್ ಜೂ.4ರಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಸಾಮೂಹಿಕ ಅತ್ಯಾಚಾರದಲ್ಲಿ ಎಐಎಂಐಎಂ ಶಾಸಕರ ಪುತ್ರ ಭಾಗಿಯಾಗಿದ್ದ ಮತ್ತು ಇದನ್ನು ಸಾಬೀತುಗೊಳಿಸುವ ಹೆಚ್ಚಿನ ಸಾಕ್ಷಗಳು ತನ್ನ ಬಳಿಯಿವೆ ಎಂದಿದ್ದ ರಾವ್,ಆದಾಗ್ಯೂ ವೀಡಿಯೊ ತುಣುಕಿನಲ್ಲಿ ಸಂತ್ರಸ್ತೆಯ ಮುಖ ಗೋಚರಿಸುತ್ತಿಲ್ಲ ಮತ್ತು ಆಕೆಯನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಮೇ 28ರಂದು ಹೈದರಾಬಾದ್ನ ಪಬ್ವೊಂದಕ್ಕೆ ಭೇಟಿ ನೀಡಿದ್ದ ಹದಿಹರೆಯದ ಬಾಲಕಿಯನ್ನು ಮನೆಗೆ ಬಿಡುವ ಭರವಸೆಯೊಂದಿಗೆ ತಮ್ಮ ಕಾರಿನಲ್ಲಿ ಕರೆದೊಯ್ದಿದ್ದ ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ ಐವರು ಆರೋಪಿಗಳು ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂವರು ಅಪ್ರಾಪ್ತ ವಯಸ್ಕ ಆರೋಪಿಗಳ ಪೈಕಿ ಓರ್ವ ಅಧಿಕಾರದಲ್ಲಿರುವ ನಾಯಕರೋರ್ವರ ಪುತ್ರ ಎನ್ನಲಾಗಿದೆ.







