ಬೆಂಗಳೂರು | ಅಂಗಡಿ ಮಾಲಕನ ಕೊಲೆಗೈದು ಚಿನ್ನಾಭರಣ ದೋಚಿದ್ದ ಪ್ರಕರಣ: ನಾಲ್ವರ ಬಂಧನ, 4 ಕೋಟಿ ಮೌಲ್ಯದ ವಸ್ತುಗಳ ಜಪ್ತಿ

ಬೆಂಗಳೂರು, ಜೂ.7: ಎಲೆಕ್ಟ್ರಿಕಲ್ ಉಪಕರಣಗಳ ಅಂಗಡಿಯ ವೃದ್ಧ ಮಾಲಕನನ್ನು ಕೊಲೆಗೈದು ಹಣ ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಆರೋಪದಡಿ ನಾಲ್ವರನ್ನು ಬಂಧಿಸಿರುವ ಚಾಮರಾಜಪೇಟೆ ಠಾಣಾ ಪೊಲೀಸರು 4ಕೋಟಿ 93 ಲಕ್ಷ 80 ಸಾವಿರ ಮೌಲ್ಯದ ನಗದು ಚಿನ್ನ ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ, ಪ್ರಮುಖ ಆರೋಪಿ ಬಿಜಾರಾಮ್ ಜೊತೆಗೆ ಪೂರನ್‍ರಾಮ್(26) ಮಹೇಂದ್ರ ದೇವಸಿ(35) ಹಾಗೂ ಓಂಪ್ರಕಾಶ್ ದೇವಸಿ(26) ಬಂಧಿಸಿ 53 ಲಕ್ಷ 48 ಲಕ್ಷ ನಗದು ಸೇರಿ 4 ಕೋಟಿ 93 ಲಕ್ಷ 80 ಸಾವಿರ ಮೌಲ್ಯದ 8ಕೆಜಿ 752 ಗ್ರಾಂ ಚಿನ್ನಾಭರಣಗಳು 3ಕೆಜಿ, 870 ಗ್ರಾಂ ಬೆಳ್ಳಿ ಗಟ್ಟಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿ ಬಿಜುರಾಮ್ ಕಳೆದ 6 ತಿಂಗಳಿಂದ ಜುಗ್‍ರಾಜ್‍ಜೈನ್ ಅವರ ಚಿಕ್ಕಪೇಟೆಯಲ್ಲಿರುವ ದೀಪಂ ಎಲೆಕ್ಟ್ರಿಕಲ್ಸ್ ಅಂಗಡಿ ಮತ್ತು ಚಾಮರಾಜಪೇಟೆಯ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು ಕಳೆದ ಮೇ25 ರಂದು ಜುಗ್‍ರಾಜ್‍ಜೈನ್‍ರವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಸಹಚರರು ಜೊತೆ ಸೇರಿ ಜುಗ್‍ರಾಜ್‍ಜೈನ್ ಅವರು ಒಬ್ಬರೇ ಇರುವುದನ್ನು ತಿಳಿದು 2 ದಿನಗಳಿಂದ ಸಂಚು ರೂಪಿಸಿ ಮೇ 24 ರಂದು ರಾತ್ರಿ 9-30ರ ವೇಳೆ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಬಾಯಿಗೆ ಬಟ್ಟೆ ತುರುಕಿ, ಎರಡು ಕೈಗಳನ್ನು ಬೆನ್ನಿನ ಹಿಂದಕ್ಕೆ ಪ್ಲಾಸ್ಟಿಕ್ ದಾರದಿಂದ ಕಟ್ಟಿ, ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದರು.
ಮನೆಯಲ್ಲಿದ್ದ ಸುಮಾರು 15 ಕೆಜಿ ತೂಕದಷ್ಟು ಚಿನ್ನ ಮತ್ತು ಬೆಳ್ಳಿ ಆಭರಣಗಳು, ನಗದು ಹಣ 60 ಲಕ್ಷ ರೂಗಳನ್ನು ಆರೋಪಿ ಬಿಜಾರಾಮ್ ಮತ್ತು ಆತನ ಸಹಚರ ಓಂ ರಾಮ್ ದೇವಸಿರವರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡ ಬೆನ್ನಲ್ಲೇ ಮೇ 29ರಂದು ಗುಜರಾತ್‍ನ ಅಮೀರ್‍ಗಢ ಠಾಣೆಯ ಪೊಲೀಸರ ಸಹಕಾರದಿಂದ ಆರೋಪಿ ಬಿಜಾರಾಮ್‍ನನ್ನು ಬಂಧಿಸಲಾಗಿತ್ತು ಎಂದರು.
ಬಳಿಕ ಆತ ವಿಚಾರಣೆಯಲ್ಲಿ ನೀಡಿದ ಮಾಹಿತಿ ಆಧರಿಸಿ ಮೂರನೆ ಪೂರನ್‍ರಾಮ್ ದೇವಸಿನನ್ನು ಗೋವಾದ ಆತನ ನಿವಾಸದಲ್ಲಿ ವಶಕ್ಕೆ ಪಡೆದು ಈತನಿಂದ ಕಳವು ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಾಚರಣೆಯನ್ನು ಚಾಮರಾಜಪೇಟೆ ಪೊಲೀಸ್ ಇನ್‍ಸ್ಪೆಕ್ಟರ್ ಎರ್ರಿಸ್ವಾಮಿ ಅವರನ್ನೊಳಗೊಂಡ ಡಿಸಿಪಿ ಡಾ.ಸಂಜೀವ್ ಪಾಟೀಲ್ ನೇತೃತ್ವದ ವಿಶೇಷ ತಂಡ ನಡೆಸಿದೆ ಎಂದು ಅವರು ತಿಳಿಸಿದರು.







