ಬೆಂಗಳೂರು | ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ಅನುಮತಿಗೆ 959 ಅರ್ಜಿ: ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಬೆಂಗಳೂರು, ಜೂ.7: ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ಬಳಕೆ ಸಂಬಂಧ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಅನುಮತಿ ಪಡೆಯಲು ಒಟ್ಟು 959 ಅರ್ಜಿ ಸಲ್ಲಿಕೆ ಆಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.
ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಸೀದಿ ಮತ್ತು ಮಂದಿರದಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕೋರಿ ಈವರೆಗೆ ಸುಮಾರು 959 ಅರ್ಜಿಗಳು ಪೊಲೀಸರಿಗೆ ಬಂದಿವೆ. ಈ ಪೈಕಿ 121 ಅರ್ಜಿದಾರರಿಗೆ ಕಾನೂನಿನ ಅಡಿಯಲ್ಲಿ ಅನುಮತಿ ನೀಡಲಾಗಿದೆ ಎಂದರು.
ಉಳಿದಂತೆ ಅರ್ಜಿಗಳನ್ನು ಪರಿಶೀಲಿಸಿ ಬಳಿಕ ವಿಲೇವಾರಿ ಮಾಡಲಾಗುವುದು. ಈ ಕುರಿತು ಯಾವುದೇ ಗೊಂದಲ ಇಲ್ಲ. ಕಾನೂನು ಬದ್ಧವಾಗಿ ಎಲ್ಲರಿಗೂ ಅನುಮತಿ ದೊರೆಯಲಿದೆ ಎಂದು ಅವರು ಹೇಳಿದರು.
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಭೆ ಸಮಾರಂಭಕ್ಕೆ ಅನುಮತಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಸದ್ಯ ಈವರೆಗೂ ಯಾರೂ ಅನುಮತಿ ಕೋರಿ ಅರ್ಜಿ ಸಲ್ಲಿಸಿಲ್ಲ. ಒಂದು ವೇಳೆ ಅರ್ಜಿ ಕೊಟ್ಟರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.







