ಸರಕಾರದ ವಿರುದ್ಧ ತಿರುಗಿ ಬೀಳದಂತೆ ನಿರುದ್ಯೋಗಿಗಳ ಕೈಗೆ ತ್ರಿಶೂಲ: ಸಿದ್ದರಾಮಯ್ಯ ಆರೋಪ

ಬೆಂಗಳೂರು, ಜೂ. 7: ‘ರಾಜ್ಯದಲ್ಲಿ ವಿದ್ಯಾವಂತ ಯುವಜನರ ನಿರುದ್ಯೋಗದ ಪ್ರಮಾಣ ಮಿತಿ ಮೀರಿದೆ. ಬಿಜೆಪಿ ಮತ್ತು ಮೋದಿಯವರ ದುರಾಡಳಿತದಿಂದಾಗಿಯೇ ಈ ದುಸ್ಥಿತಿ ಬಂದೊದಗಿದೆ. ರೊಚ್ಚಿಗೆದ್ದ ನಿರುದ್ಯೋಗಿ ಪದವೀಧರರ ರಟ್ಟೆಯ ಸಿಟ್ಟು ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ತಿರುಗದಂತೆ ತಡೆಯುವ ಸಲುವಾಗಿಯೇ ನಿರುದ್ಯೋಗಿ ಯುವ ಸಮೂಹದ ಕೈಗೆ ತ್ರಿಶೂಲ, ಮಾರಕಾಸ್ತ್ರಗಳನ್ನು ನೀಡಿ ಜಾತಿ-ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಡಿಸುತ್ತಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಎಂಟು ವರ್ಷದಲ್ಲಿ ನಿರುದ್ಯೋಗಿ ಯುವಜನರಿಗೆ ನರಕ ತೋರಿಸಿದೆ. ಯಾವುದೇ ದೇಶದ ಆರ್ಥಿಕತೆಗೆ ವೇಗ ಬರುವುದು ಅಲ್ಲಿನ ಯುವಜನ ದುಡಿಮೆಯಲ್ಲಿ ತೊಡಗಿಕೊಂಡಾಗ ಮಾತ್ರ. ಜನರು ಖರ್ಚು ಮಾಡುತ್ತಿದ್ದರೆ ದೇಶದ ಆರ್ಥಿಕತೆಯ ಬೆಳವಣಿಗೆ ಸಮರ್ಪಕವಾಗಿರುತ್ತದೆ. ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತವರಿಗೆ ಇಷ್ಟು ಜ್ಞಾನವಿಲ್ಲದೆ ಹೋದರೆ ಅಂತಹ ದೇಶ ಅರಾಜಕತೆಯತ್ತ ಸಾಗಿ ಅಧೋಗತಿಗೆ ಇಳಿಯುತ್ತದೆ. ಇದಕ್ಕೆ ಸದ್ಯ ಭಾರತವೇ ಉದಾಹರಣೆ' ಎಂದು ಟೀಕಿಸಿದ್ದಾರೆ.
‘ಎಂಜಿನಿಯರಿಂಗ್ ಮುಂತಾದ ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ದೇಶದ ಯುವ ಜನತೆ ಕೆಲಸ ಕೇಳಿದರೆ ಮೋದಿಯವರು ಪಕೋಡ ಮಾರಾಟ ಮಾಡಿ ಎನ್ನುತ್ತಾರೆ. ಒಬ್ಬ ಇಂಜಿನಿಯರ್‍ನ್ನು ಸಿದ್ಧಪಡಿಸಲು ದೊಡ್ಡ ಮೊತ್ತದ ತೆರಿಗೆ ಹಣವನ್ನು ಆತನ ಮೇಲೆ ವಿನಿಯೋಗಿಸಲಾಗಿರುತ್ತದೆ. ದೇಶದ ಕೋಟ್ಯಾನುಕೋಟಿ ಪದವೀಧರರು ಹಳ್ಳಿಗಳಲ್ಲಿ ಅವಮಾನ ಅನುಭವಿಸುತ್ತಿದ್ದಾರೆ. ನಗರಗಳಲ್ಲಿ ಸೆಕ್ಯುರಿಟಿ ಗಾರ್ಡುಗಳಾಗಿ, ಟ್ಯಾಕ್ಸಿ ಚಾಲಕರಾಗಿ, ಸ್ವಿಗ್ಗಿ, ಝೊಮ್ಯಾಟೊ ಮುಂತಾದ ಕಡೆ ಡೆಲಿವರಿ ಮಾಡುವವರಾಗಿ, ಗಾರ್ಮೆಂಟ್‍ಗಳಲ್ಲಿ 8-10 ಸಾವಿರ ರೂ.ಗೆ ದುಡಿಯುತ್ತಿದ್ದಾರೆ' ಎಂದು ಅವರು ಗಮನ ಸೆಳೆದಿದ್ದಾರೆ.
‘ಯುವ ಭಾರತದ ಇಂದಿನ ಸರಾಸರಿ ವಯಸ್ಸು 28.3 ವರ್ಷ. ಇಲ್ಲಿ 35 ವರ್ಷದ ಒಳಗಿನ ಯುವ ಸಮೂಹ ಶೇ.65ರಷ್ಟಿದೆ. ರಾಷ್ಟ್ರವೊಂದರ ಇತಿಹಾಸದಲ್ಲಿ ಅಪರೂಪಕ್ಕೆ ಈ ರೀತಿಯ ಅವಕಾಶಗಳು ದೊರೆಯುತ್ತವೆ. 25 ವರ್ಷದೊಳಗಿನವರ ಸಂಖ್ಯೆ ಶೇ.50ರಷ್ಟಿದೆ. 2014ರಲ್ಲಿ 25 ವರ್ಷದವರಿದ್ದ ಯುವಕರು 2024ಕ್ಕೆ 35 ವರ್ಷದವರಾಗುತ್ತಾರೆ. 20ವರ್ಷದವರು 30 ವರ್ಷದವರಾಗುತ್ತಾರೆ. ಆದರೆ, ಏರುತ್ತಿರುವ ನಿರುದ್ಯೋಗದಿಂದಾಗಿ 35 ವರ್ಷದ ಯುವಕರು ಬದುಕು ಕಟ್ಟಿಕೊಳ್ಳುವ ಅವಕಾಶ ಶೇ.75ರಷ್ಟು ಕುಸಿದು ಹೋಗುತ್ತಿದೆ' ಎಂದು ಅವರು ವಿವರ ನೀಡಿದ್ದಾರೆ.
‘ಭಾರತೀಯರ ತಲಾವಾರು ಆದಾಯದ ಜಿಡಿಪಿ 2020ರಲ್ಲಿ 1,877 ಡಾಲರುಗಳಷ್ಟಾಗಿದೆ. ಇನ್ನು 15 ವರ್ಷಕ್ಕೆ ಭಾರತ ವಯಸ್ಕರ ದೇಶವಾಗುತ್ತದೆ. ದುಡಿಮೆಯ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಆಗ ಅಭಿವೃದ್ಧಿಯನ್ನು ಸಾಧಿಸುವುದು ಹೇಗೆ? ಮೋದಿಯವರು 2014ರಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯ ಮಾತನ್ನಾಡಿದ್ದರು. ಆ ಉದ್ಯೋಗಗಳು ಎಲ್ಲಿಗೆ ಹೋದವು? 2020ರಲ್ಲಿ ದೇಶದ 11,716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರಕಾರದ ಎನ್‍ಸಿಆರ್‍ಬಿ ದಾಖಲೆಗಳು ಹೇಳುತ್ತಿವೆ. ಇದರಲ್ಲಿ ಕರ್ನಾಟಕದ ಉದ್ಯಮಿಗಳು 1,772. ಇದು 2019ಕ್ಕೆ ಹೋಲಿಸಿದರೆ ಶೇ.103ರಷ್ಟು ಹೆಚ್ಚು' ಎಂದು ಸಿದ್ದರಾಮಯ್ಯ ಅಂಕಿಅಂಶಗಳನ್ನು ನೀಡಿದ್ದಾರೆ.
ದೇಶದಲ್ಲಿ 60 ಲಕ್ಷ ಎಂಎಸ್‍ಎಂಇಗಳನ್ನು ಮುಚ್ಚಲಾಗಿದೆ. 2014ರಲ್ಲಿ ಎಂಎಸ್‍ಎಂಇ ಮತ್ತು ಅವುಗಳ ಸಂಬಂಧಿತ ವಲಯದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಸಂಖ್ಯೆ ಸುಮಾರು 10ಕೋಟಿಗಳಷ್ಟಿತ್ತು. ಇದೀಗ ಅದು 2.5 ಕೋಟಿಗೆ ಕುಸಿದಿದೆ. ಎಂಎಸ್‍ಎಂಇ ವಲಯವೊಂದರಲ್ಲೆ ಹೊಸದಾಗಿ ಕನಿಷ್ಠ 16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಈಗ 2014ರಲ್ಲಿ ಇದ್ದ ಉದ್ಯೋಗಗಳೂ ನಾಶವಾಗಿ ಹೋಗಿ ಎಂಎಸ್‍ಎಂಇಯಲ್ಲಿ ಕೇವಲ 2.5 ಕೋಟಿ ಉದ್ಯೋಗಗಳು ಉಳಿದಿವೆ ಎಂದು ವರದಿಗಳು ಹೇಳುತ್ತಿವೆ. ಇತ್ತ ಸರಕಾರಿ ಉದ್ಯೋಗಗಳನ್ನೂ ತುಂಬುತ್ತಿಲ್ಲ. 8.72 ಲಕ್ಷ ಉದ್ಯೋಗಗಳು ಕೇಂದ್ರದಲ್ಲಿ ಖಾಲಿ ಇವೆ. ರಾಜ್ಯಗಳು ಸುಮಾರು 45 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ಅವರು ದೂರಿದ್ದಾರೆ.
ಕೇಂದ್ರ ಸರಕಾರ ನಿರಂತರವಾಗಿ ಸರಕಾರಿ ಸಂಸ್ಥೆ, ಕಂಪೆನಿ, ಕಾರ್ಖಾನೆಗಳನ್ನು ಮುಚ್ಚುತ್ತಿರುವುದರಿಂದ 2018ರ ಹೊತ್ತಿಗೆ ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಸಂಖ್ಯೆ ಸುಮಾರು 2.5 ಲಕ್ಷದಷ್ಟು ಕಡಿಮೆಯಾಗಿದೆ. 2013-14ರಲ್ಲಿ 16.50 ಲಕ್ಷದಷ್ಟಿದ್ದ ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಗಳ ನೌಕರರ ಸಂಖ್ಯೆ 2018ರ ವೇಳೆಗೆ 14 ಲಕ್ಷಕ್ಕೆ ಇಳಿದಿದೆ. 2021ರಲ್ಲಿ ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ. ಪ್ರಸ್ತುತ ವರದಿಗಳ ಪ್ರಕಾರ ಈಗ ನಗರ ನಿರುದ್ಯೋಗ ಶೇ.7.9ರಷ್ಟಿದೆ ಹಾಗೂ ಗ್ರಾಮೀಣ ನಿರುದ್ಯೋಗ ಶೇ.7.0ರಷ್ಟಿದೆ. ಈ ಪ್ರಮಾಣದ ನಿರುದ್ಯೋಗ ನೂರು ವರ್ಷಗಳಲ್ಲೆ ಅಧಿಕ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.







