ಬ್ರಿಟನ್: ವಿಶ್ವಾಸ ಮತ ಗೆದ್ದ ಬಳಿಕ ಸಂಪುಟ ಸಭೆ ನಡೆಸಿದ ಜಾನ್ಸನ್

PHOTO CREDIT: Leon Neal/AP
ಲಂಡನ್, ಜೂ.7: ತನ್ನ ಪಕ್ಷದಲ್ಲಿ ಬಂಡಾಯದ ಹೊರತಾಗಿಯೂ ತನ್ನ ವಿರುದ್ಧದ ವಿಶ್ವಾಸ ಮತದಲ್ಲಿ ಮೇಲುಗೈ ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಂಗಳವಾರ ಸಚಿವ ಸಂಪುಟದ ತುರ್ತು ಸಭೆ ನಡೆಸಿದರು ಎಂದು ವರದಿಯಾಗಿದೆ.
ಕನ್ಸರ್ವೇಟಿವ್ ಪಕ್ಷದ 54 ಸಂಸದರೂ ರಾಜೀನಾಮೆಗೆ ಆಗ್ರಹಿಸಿದ್ದರಿಂದ ಸೋಮವಾರ ನಡೆದ ವಿಶ್ವಾಸಮತ ಪ್ರಕ್ರಿಯೆ ಅತ್ಯಂತ ಕುತೂಹಲ ಕೆರಳಿಸಿತ್ತು. ಆದರೆ ನಾಟಕೀಯ ಬೆಳವಣಿಗೆಯಲ್ಲಿ ಜಾನ್ಸನ್ ಪರ 211 ಮತ ಹಾಗೂ ವಿರೋಧವಾಗಿ 148 ಮತ ಚಲಾವಣೆಯಾಗಿದ್ದು ಜಾನ್ಸನ್ ನಿರ್ಣಾಯಕ ಫಲಿತಾಂಶದೊಂದಿಗೆ ಗೆಲುವಿನ ನಗೆ ಬೀರಿದರು. 359 ಕನ್ಸರ್ವೇಟಿವ್ ಸದಸ್ಯರಲ್ಲಿ 180 ಸದಸ್ಯರು ಜಾನ್ಸನ್ ಪರ ನಿಂತರು. ರಹಸ್ಯ ಮತದಾನ ನಡೆಯಬೇಕು ಎಂದು ಜಾನ್ಸನ್ ಬೆಂಬಲಿಗ ಸದಸ್ಯರು ಅಭಿಪ್ರಾಯಪಟ್ಟಿದ್ದರೆ ಇದನ್ನು ಬಂಡುಗೋರ ಸದಸ್ಯರು ವಿರೋಧಿಸಿದ್ದರು. ಆದರೆ ಈ ಫಲಿತಾಂಶವನ್ನು ಬಹುತೇಕ ರಾಜಕೀಯ ವಿಶ್ಲೇಷಕರು ಟೀಕಿಸಿದ್ದಾರೆ. ಜಾನ್ಸನ್ ಅವರ ಗೆಲುವು ಟೋರಿ ಪಕ್ಷ(ಕನ್ಸರ್ವೇಟಿವ್ ಪಕ್ಷ)ವನ್ನು ಹರಿದು ಹಂಚಿಬಿಟ್ಟಿದೆ ಎಂದು ಡೈಲಿ ಟೆಲಿಗ್ರಾಫ್ನ ಅಂಕಣಕಾರರು ಅಭಿಪ್ರಾಯಪಟ್ಟಿದ್ದಾರೆ.
ಜಾನ್ಸನ್ ಗೆದ್ದಿರಬಹುದು, ಆದರೆ ಪಕ್ಷದ ಮೇಲಿನ ಅವರ ಹಿಡಿತಕ್ಕೆ ಧಕ್ಕೆಯಾಗಿದೆ ಮತ್ತು ಪ್ರಧಾನಿ ಹುದ್ದೆಯಿಂದ ನಿರ್ಗಮಿಸಲು ದಿನಗಣನೆ ಆರಂಭವಾಗಿದೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ಜಾನ್ಸನ್ ಓರ್ವ ಗಾಯಗೊಂಡ ವಿಜಯಿ ಎಂದು ‘ದಿ ಟೈಮ್ಸ್’ ಹೇಳಿದೆ. ಬ್ರೆಕ್ಸಿಟ್ನ ರೂವಾರಿಯಾಗಿ ಗುರುತಿಸಿಕೊಂಡಿದ್ದ ಜಾನ್ಸನ್ 2 ವರ್ಷದ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರು. ಆದರೆ ಕ್ರಮೇಣ ಸರಣಿ ಹಗರಣಗಳ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇತ್ತೀಚೆಗೆ ನಡೆದ ಪಾರ್ಟಿಗೇಟ್ ವಿವಾದ ಜಾನ್ಸನ್ ಅವರ ವಿರುದ್ಧ ಅವಿಶ್ವಾಸಮತ ಮಂಡಿಸಲು ವೇದಿಕೆ ಒದಗಿಸಿತ್ತು. ಪಕ್ಷದ ನಿಯಮದಂತೆ, ಇನ್ನು ಒಂದು ವರ್ಷ ಜಾನ್ಸನ್ ಅವರನ್ನು ಬದಲಾಯಿಸುವಂತಿಲ್ಲ. 2024ರ ಅಂತ್ಯದೊಳಗೆ ಬ್ರಿಟನ್ನಲ್ಲಿ ಹೊಸ ಸಾರ್ವತ್ರಿಕ ಚುನಾವಣೆ ನಡೆಯಲಿದೆ.