1 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪ: ಬಿಡಿಎ ಅಧಿಕಾರಿ ಎಸಿಬಿ ಬಲೆಗೆ

ಬೆಂಗಳೂರು, ಜೂ.7:ನಿವೇಶನ ಹಂಚಿಕೆ ಸಂಬಂಧ ಬರೋಬ್ಬರಿ 1 ಕೋಟಿ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ ಬಿಡಿಎ ಪಶ್ಚಿಮ ವಿಭಾಗದ ಸಹಾಯಕ ಅಭಿಯಂತರನೋರ್ವ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಬಿಡಿಎ ಸಹಾಯಕ ಅಭಿಯಂತರ ಬಿ.ಟಿ.ರಾಜು ಎಂಬಾತ ಸಿಕ್ಕಿಬಿದ್ದಿದ್ದು, ಈತನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ನಗರದ ಹೊರವಲಯದ ಕೆಂಗೇರಿ ಹೋಬಳಿಯ ರಾಮಸಂದ್ರ ಗ್ರಾಮದ ನಿವಾಸಿಯೊಬ್ಬರ 33 ಗುಂಟೆ ಜಮೀನು ಇದ್ದು ಈ ಭೂಮಿ ವಿಶ್ವೇಶರಯ್ಯ ಲೇಔಟ್‍ನ ರಸ್ತೆ ನಿರ್ಮಾಣದ ಸಂಬಂಧ ಬಿಡಿಎನಿಂದ ಯಾವುದೇ ಅಧಿಸೂಚನೆ ಇಲ್ಲದೇ ಬಳಸಿಕೊಳ್ಳಲಾಗಿದೆ. ಹೀಗಾಗಿ, ಬಿಡಿಎನಿಂದ ನೀಡುವ ಬದಲಿ ನಿವೇಶನದ ಕುರಿತಂತೆ ಬಿಡಿಎ ಕಚೇರಿಗೆ ಅರ್ಜಿ ಸಲ್ಲಿಕೆಯಾಗಿತ್ತು.
ಆದರೆ, ಬದಲಿ ನಿವೇಶನ ನೀಡುವ ಸಂಬಂಧ ಜಮೀನು ಭೂಸ್ವಾಧೀನವಾಗಿರುವ ಬಗ್ಗೆ ಸಂಬಂಧಪಟ್ಟ ಸ್ಥಳದ ಪರಿಶೀಲನೆ ನಡೆಸಿ ನಕ್ಷೆಯೊಂದಿಗೆ ವರದಿಯನ್ನು ನೀಡುವ ಸಲುವಾಗಿ ಬಿಡಿಎ ಪಶ್ಚಿಮ ವಿಭಾಗ ಕಚೇರಿಯ ಸಹಾಯಕ ಅಭಿಯಂತರ ಬಿ.ಟಿ.ರಾಜು, ಬರೋಬ್ಬರಿ 1 ಕೋಟಿ ರೂ. ಲಂಚ ನೀಡವಂತೆ ಬೇಡಿಕೆಯಿಟ್ಟಿದ್ದ ಎಂದು ಎಸಿಬಿ ತಿಳಿಸಿದೆ.
ಅಷ್ಟೇ ಅಲ್ಲದೆ, ಮುಂಗಡವಾಗಿ 60 ಲಕ್ಷ ರೂ. ನೀಡುವಂತೆಯೂ ಸೂಚಿಸಿದ್ದ.ಈ ಸಂಬಂಧ ದಾಖಲಾದ ದೂರಿನ್ವಯ ಮಂಗಳವಾರ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಬಿ.ಟಿ.ರಾಜು ಲಂಚ ಸ್ವೀಕರ ಮಾಡುವ ಸಂದರ್ಭದಲ್ಲಿ ದಾಖಲೆ ಸಮೇತ ಬಂಧಿಸಿದ್ದಾರೆ ಎಂದು ಎಸಿಬಿ ಹಿರಿಯ ಅಧಿಕಾರಿವೊಬ್ಬರು ಮಾಹಿತಿ ನೀಡಿದರು.







