ಪ್ರಮೋದ್ ಮುತಾಲಿಕ್ ಅನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು: ಶಾಸಕ ಝಮೀರ್ ಅಹ್ಮದ್

ಬೆಂಗಳೂರು, ಜೂ.7: ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಯಲು ಸರಕಾರಕ್ಕೆ ಗಡುವು ನೀಡುವುದಾಗಿ ಹಾಗೂ ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಹೇಳಿಕೆ ನೀಡಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‍ಗೆ ತಕ್ಷಣ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.
ಮಂಗಳವಾರ ಚಾಮರಾಜಪೇಟೆಯ ರಾಯಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‍ನ ಆದೇಶದಲ್ಲಿ ಎಲ್ಲಿಯೂ ಧ್ವನಿವರ್ಧಕಗಳನ್ನು ತೆರವುಗೊಳಿಸಿ ಎಂದು ಹೇಳಿಲ್ಲ. ಅದರ ಬದಲಾಗಿ, ವಸತಿ ಪ್ರದೇಶ, ವಾಣಿಜ್ಯ ಪ್ರದೇಶ, ಕೈಗಾರಿಕಾ ಪ್ರದೇಶ ಹಾಗೂ ಶಾಲಾ, ಕಾಲೇಜುಗಳು, ಆಸ್ಪತ್ರೆಗಳ ಬಳಿ ಧ್ವನಿವರ್ಧಕಗಳ ಬಳಕೆಗೆ ನಿರ್ದಿಷ್ಟ ಮಿತಿಯನ್ನು ವಿಧಿಸಲಾಗಿದೆ ಎಂದರು.
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲೆ ಕೇಂದ್ರ ಸರಕಾರವು ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆದುಕೊಳ್ಳುವಂತೆ ಸೂಚಿಸಿರುವುದರಿಂದ ಎಲ್ಲ ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು, ಗುರುದ್ವಾರಗಳು ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆದುಕೊಳ್ಳುತ್ತಿವೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಸರಕಾರಕ್ಕೆ ಗಡುವು ನೀಡುವುದು ಹಾಗೂ ತೆಗೆಯದಿದ್ದರೆ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿಕೆಗಳನ್ನು ನೀಡುವ ಮುನ್ನ ಪ್ರಮೋದ್ ಮುತಾಲಿಕ್, ನ್ಯಾಯಾಲಯದ ಆದೇಶದಲ್ಲಿ ಏನಿದೆ ಅನ್ನೋದನ್ನು ತಿಳಿದುಕೊಳ್ಳಲಿ. ಸುಮ್ಮನೆ ಪ್ರಚಾರಕ್ಕಾಗಿ, ಬಾಯಿಗೆ ಬಂದಂತೆ ಮಾತನಾಡುವುದು ಬೇಡ ಎಂದು ಅವರು ಹೇಳಿದರು.







