ರಾಜ್ಯದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ: ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್
''ರಾಜ್ಯದಲ್ಲಿರುವುದು ಸಂಘಪರಿವಾರದ ಸರ್ಕಾರವಲ್ಲ''

ಮೈಸೂರು,ಜೂ.7: ರಾಜ್ಯದಲ್ಲಿ ಉಂಟಾಗುತ್ತಿರುವ ಮಸೀದಿ ವಿವಾದ ರಾಜ್ಯದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ. ಕೊಲ್ಲಿ ರಾಷ್ಟ್ರಗಳು ಭಾರತಕ್ಕೆ ಪಾಠ ಹೇಳುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ರಾಜ್ಯ ಸರ್ಕಾರ ಸುಮ್ಮನಿರುವುದು ಒಳ್ಳೇಯದಲ್ಲ. ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ. ಆರೆಸ್ಸೆಸ್, ಶ್ರೀರಾಮಸೇನೆ, ಬಜರಂಗದಳ, ಹಿಂದೂಪರ ಸಂಘಟನೆಗಳ ಸರ್ಕಾರವಲ್ಲ. 17 ಜನ ಶಾಸಕರು ಬೆಂಬಲ ಕೊಟ್ಟಿರುವುದು ಬಿಜೆಪಿಗೆ ಹೊರತು ಆರ್‍ಎಸ್‍ಎಸ್ ಗಲ್ಲ ಎಂದು ವಿಧಾನಪರಿಷತ್ ಸದಸ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಮಸೀದಿಗಳಲ್ಲಿ ಶಿವಲಿಂಗ ಹುಡುಕುವ ಕೆಲಸವನ್ನು ಕೆಲವು ಹಿಂದೂಪರ ಸಂಘಟನೆಗಳು ಮಾಡುತ್ತಿವೆ. ಇದರಿಂದ ರಾಜ್ಯದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ. ಇಷ್ಟಾದರೂ ಸರ್ಕಾರ ಮೌನವಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ದೇಶಗಳಲ್ಲಿ ನಮ್ಮ ದೇಶದ 25 ಲಕ್ಷ ಕುಟುಂಬಗಳ 1.5 ಕೋಟಿ ಜನರು ವಾಸ ಮಾಡುತ್ತಿದ್ದಾರೆ. ಹೀಗೆ ಧರ್ಮದ ವಿಚಾರದಲ್ಲಿ ಅಶಾಂತಿ ಕದಡುತ್ತಿದ್ದರೇ ಪರಿಸ್ಥಿತಿ ಏನಾಗಬಹುದು? ಯೋಚನೆ ಮಾಡಬೇಕು. ಬಾಯಿಗೆ ಬಂದಂತೆ ಮಾತಾಡುವುದನ್ನು ನಿಲ್ಲಿಸಬೇಕು ಎಂದರು.
ದೇಶ ವಿಭಜನೆಯಾದಾಗ ಉಳಿದ ಮುಸ್ಲಿಮರು ನಮ್ಮ ಅಣ್ಣ ತಮ್ಮಂದಿರು, ಮಸೀದಿಯಲ್ಲಿ ಶಿವಲಿಂಗ ಹುಡುಕಾಟ ನಿಲ್ಲಿಸಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೋಹನ್ ಭಾಗವತ್ ತಿಳವಳಿಕೆ ಕೊಟ್ಟ ಮೇಲೂ ಪ್ರಕ್ಷುಬ್ಧತೆ ನಿರ್ಮಿಸುವಂತಹ ಹೇಳಿಕೆ ಕೊಡುತ್ತಿರುವುದು ಸರಿಯಲ್ಲ, ಕಟ್ಟರ್ ಆರ್‍ಎಸ್‍ಎಸ್ ವಾದಿಗಳು ಮೋಹನ್ ಭಾಗವತರ ಆದೇಶವನ್ನು ಏಕೆ ಪಾಲನೆ ಮಾಡುತ್ತಿಲ್ಲ. ಪ್ರತಾಪಸಿಂಹ, ತೇಜಸ್ವಿ ಸೂರ್ಯ, ಸಿ.ಟಿ.ರವಿ, ಬಿ.ಎಲ್.ಸಂತೋಷ್, ಬಸನಗೌಡ ಪಾಟೀಲ್ ಯತ್ನಾಳ್ ಯಾಕೇ ಮೌನವಾಗಿದ್ದಾರೆ? ಪ್ರಶ್ನಿಸಿದರು.
ಧರ್ಮ, ಉಪಾಸನೆಯನ್ನು ಪರಸ್ಪರ ಗೌರವಿಸಬೇಕು. ಈ ವಿಚಾರದಲ್ಲಿ ಭಾರತದ ಅಖಂಡತೆಗೆ ಧಕ್ಕೆ ತರಬಾರದೆಂದೂ ಹೇಳಿದ್ದಾರೆ. ಆದರೆ ತಿರುಗಿ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಭಾಗವತರ ಮಾತುಗಳನ್ನು ಕೇಶವಕೃಪಾದಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಬೇಕಿತ್ತು ಎಂದು ತಿಳಿಸಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆರೆಸ್ಸೆಸ್ ಮುಖ್ಯ ಕಚೇರಿಗೆ ಹೋಗಿ ಪಠ್ಯ ಪರಿಷ್ಕರಣೆ ಒಪ್ಪಿಗೆ ಪಡೆದು ಬಂದಿದ್ದಾರೆ. ಸಂಘದ ಕಚೇರಿ ಸಾಂವಿಧಾನಿಕ ಸಂಸ್ಥೆಯೇ? ಎಂದು ಪ್ರಶ್ನಿಸಿದರು.
ಹಾಗೆಯೇ ಡೋನೆಷನ್ ಸೀಟು ಗಿರಾಕಿಗಳಾಗಿರುವ ಸ್ವಾಮೀಜಿಗಳ ಒಪ್ಪಿಗೆ ಪಡೆಯುವ ಅವಶ್ಯವಿಲ್ಲ. ರಾಜ್ಯದ ಜನರು, ಶಿಕ್ಷಕರು, ಮಕ್ಕಳ ಒಪ್ಪಿಗೆ ಪಡೆಯಬೇಕು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕುಮಾರಸ್ವಾಮಿ ಒಪ್ಪಿಸಬೇಕು ಎಂದರು.
ಪಠ್ಯ ಪರಿಷ್ಕಣೆ ವೇಳೆ ಅಂಬೇಡ್ಕರ್ ಅವರನ್ನು ಲಘುವಾಗಿ ಕಾಣಲಾಗಿದೆ. ಒಬ್ಬ ದಲಿತ ಸಾಹಿತಿ, ಮಹಿಳಾ ಸಾಹಿತಿ ಪಠ್ಯಗಳಿಲ್ಲ. ಬಸವಣ್ಣರಿಗೆ ಅವಮಾನ, ನಾರಾಯಣಗುರು ಪಠ್ಯ ಕೈ ಬಿಡಲಾಗಿದೆ. 35 ಕೋಟಿ ಖರ್ಚಾಗಿದೆ ಎಂದ ಮಾತ್ರಕ್ಕೆ ಇದೆಲ್ಲಾವನ್ನು ಮಕ್ಕಳು ಕಲಿಯಬೇಕೆ? ಪಠ್ಯ ಪರಿಷ್ಕರಣೆಯಲ್ಲಿ ಸರ್ಕಾರ ಅಪ್ರಜಾಪ್ರಭುತ್ವಕ ನಡೆ ಅನುಸರಿಸಿದೆ. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ಪಠ್ಯವನ್ನು ಕೈ ಬಿಟ್ಟು ಹಿಂದಿನ ಪಠ್ಯವನ್ನು ಈ ಸಾಲಿನಲ್ಲಿ ಮುಂದುವರಿಸಬೇಕು. ಮುಂದಿನ ವರ್ಷಕ್ಕೆ ಯೋಗ್ಯ ಪಠ್ಯ ಕೊಡುವಂತೆ ಸಲಹೆ ನೀಡಿದರು.
ಮೂರು ಪಕ್ಷಗಳ ಪದವೀಧರರನ್ನು ದುಡ್ಡು ಕೊಟ್ಟು ಹೆಂಡ ಕುಡಿಸಿ ಹಾಳು ಮಾಡುತ್ತಿದ್ದಾರೆ. ಮೈಸೂರಿನ ಎಷ್ಟು ಹೋಟೆಲ್‍ಗಳಲ್ಲಿ ಪಾರ್ಟಿ ನಡೆಯುತ್ತಿಲ್ಲ. ಚುನಾವಣಾಧಿಕಾರಿಗಳು ರೈಡ್ ಮಾಡಬೇಕು. ಕಂಠಪೂರ್ತಿ ಕುಡಿದ ಶಿಕ್ಷಕರೊಬ್ಬರು ಈವರೆಗೆ ತನಕ ಹಣ ಬಂದಿಲ್ಲ ಎನ್ನುತ್ತಿದ್ದಾರೆ. ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.







