ಸಂಘ ಪರಿವಾರದ ಮುಖಂಡರ ಕೋಮುಪ್ರಚೋದಿತ ಭಾಷಣ; ಪೊಲೀಸ್ ಇಲಾಖೆ ಮೌನ ಯಾಕೆ: ಎಸ್‌ಡಿಪಿಐ ಪ್ರಶ್ನೆ
ಮಂಗಳೂರು: ನಗರದ ಕ್ಲಾಕ್ ಟವರ್ ಬಳಿ ಸೋಮವಾರ ವಿಎಚ್‌ಪಿ, ಬಜರಂಗ ದಳದ ಮುಖಂಡರು ಕೋಮು ಪ್ರಚೋದಿತ ಭಾಷಣ ಮಾಡಿದರೂ ಪೊಲೀಸ್ ಇಲಾಖೆ ಯಾಕೆ ಮೌನ ವಹಿಸಿದೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ಪ್ರಶ್ನಿಸಿದ್ದಾರೆ.
ಸಂಘಪರಿವಾರದ ಮುಖಂಡರು ಬಹಿರಂಗವಾಗಿ ಕೋಮು ಪ್ರಚೋದಿತ ಭಾಷಣಗಳನ್ನು ಮಾಡುವಾಗ ಪೊಲೀಸ್ ಇಲಾಖೆ ಯಾಕೆ ಮೌನವಾಗಿರುವುದು ವಿಪರ್ಯಾಸ. ನಾಡಿನ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದು ಇದರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ಇತ್ತೀಚೆಗೆ ಕೆಲವು ಯುವಕರು ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಿಂದ ಘೋಷಣೆ ಕೂಗಿದರು ಎಂಬ ಕಾರಣಕ್ಕೆ ನಿರಪರಾಧಿಗಳು ಸೇರಿದಂತೆ ಹಲವಾರು ಅನೇಕ ಯುವಕರನ್ನು ಬಂಧಿಸಿ ಜೈಲಿಗೆ ಕಳಿಸಲು ಪೊಲೀಸರು ತೋರಿಸಿದ ಆಸಕ್ತಿಯನ್ನು ಸಂಘ ಪರಿವಾರದ ನಾಯಕರ ಬಗ್ಗೆ ಯಾಕೆ ವಹಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಸುಹೈಲ್ ಖಾನ್, ಪೊಲೀಸ್ ಇಲಾಖೆಯು ಸಂಘಪರಿವಾರದ ಮುಖಂಡರಾದ ಮುರಳೀಕೃಷ್ಣ ಹಸಂತಡ್ಕ, ಪುನೀತ್ ಅತ್ತಾವರ ಮತ್ತಿತರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಎಸ್‌ಡಿಪಿಐ ಸಮಾನ ಮನಸ್ಕ ನಾಗರಿಕರನ್ನು ಸೇರಿಸಿಕೊಂಡು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
೨೦೦೨ರ ಗುಜರಾತ್ ಮಾದರಿಯನ್ನು ಇಲ್ಲೂ ಮಾಡುತ್ತೇವೆ ಎಂದು ಈ ನಾಯಕರು ಹೇಳಿಕೊಂಡಿದ್ದಾರೆ. ಆದರೆ ಆವಾಗ ಎಸ್‌ಡಿಪಿಐ ಇರಲಿಲ್ಲ. ಈಗ ಎಲ್ಲಾ ಕಡೆಯೂ ಇದ್ದು, ಸಂಘಪರಿವಾರದ ಹಿಂಸಾತ್ಮಕ ಕೃತ್ಯಗಳನ್ನು ಪ್ರತಿರೋಧಿಸಲು ಸನ್ನದ್ದವಾಗಿದೆ ಎಂದು ಸುಹೈಲ್ ಖಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.