ಗೂಡ್ಸ್‌ಶೆಡ್: ಹಳೆ ಬಾವಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ
ಮಂಗಳೂರು : ನಗರದ ಗೂಡ್ಸ್‌ಶೆಡ್ ರಸ್ತೆಯ ಕ್ಯಾಂಟೀನ್ ವೊಂದರ ಸಮೀಪದ ಹಳೆ ಬಾವಿಯಲ್ಲಿ ಸೋಮವಾರ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದೆ. ವಿಪರ್ಯಾಸವೆಂದರೆ ಈ ಬಾವಿಗೆ ಕಬ್ಬಿಣದ ಜಾಲರಿ ಅಳವಡಿಸಿ ಮೇಲ್ಗಡೆ ಮುಚ್ಚಲಾಗಿದೆ. ಹಾಗಾಗಿ ಈ ಯುವಕನ ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಸುಮಾರು ೩೦ರಿಂದ ೩೫ ವರ್ಷ ಪ್ರಾಯದ ಈ ಯುವಕನ ಮೃತದೇಹ ಕವಚಿ ಬಿದ್ದು ನೀರಿನಲ್ಲಿ ತೇಲಾಡುವ ಸ್ಥಿತಿಯಲ್ಲಿ ಕಂಡು ಬಂದಿದೆ. ಈತನಿಗೆ ಸೇರಿದ್ದೆಂದು ಹೇಳಲಾದ ಒಂದು ಜೊತೆ ಚಪ್ಪಲಿಯೂ ನೀರಲ್ಲಿ ಕಂಡು ಬಂದಿದೆ. ಈ ಬಾವಿಗೆ ಸುಮಾರು ೨ ಅಡಿ ಎತ್ತರದ ಕಲ್ಲಿನಿಂದ ಕಟ್ಟಿದ ಗೋಡೆಯಿದೆ. ಅದಕ್ಕೆ ಕಬ್ಬಿಣದ ಜಾಲರಿಯನ್ನು ಮುಚ್ಚಲಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡನೇ, ಆಕಸ್ಮಿಕವಾಗಿ ನೀರಿಗೆ ಬಿದ್ದನೇ? ಮುಚ್ಚಲ್ಪಟ್ಟ ಕಬ್ಬಿಣದ ಜಾಲರಿಯಿದ್ದರೂ ಬಾವಿಯೊಳಗೆ ಹೇಗೆ ಸೇರಿದ ಇತ್ಯಾದಿ ಪ್ರಶ್ನೆ ಎದುರಾಗಿದೆ.
ಸುಮಾರು ೩-೪ ದಿನದ ಹಿಂದೆ ನೀರಿನಲ್ಲಿ ತೇಲಿದ ಕಾರಣ ಮುಖ ಬಾತು ಹೋಗಿದೆ. ಹಾಗಾಗಿ ಮುಖದ ಪರಿಚಯ ಸಿಗುತ್ತಿಲ್ಲ. ಅಲ್ಲದೆ ಮೈಮೇಲೆ ಯಾವುದೇ ಗಾಯದ ಗುರುತು ಕೂಡ ಇಲ್ಲ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈತನ ವಾರಸುದಾರರು ಇದ್ದಲ್ಲಿ ೦೮೨೪-೨೨೨೦೮೦೦/೨೨೨೦೫೧೬ನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.