ನಾಥೂರಾಮ್ ಗೋಡ್ಸೆ ನಾಮಫಲಕ ಪ್ರಕರಣ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಉಡುಪಿ ಎಸ್ಪಿಗೆ ಮನವಿ

ಉಡುಪಿ: ಕಾರ್ಕಳ ಬೋಳ ಗ್ರಾಪಂ ವ್ಯಾಪ್ತಿಯ ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರಿನ ನಾಮಫಲಕ ಅಳವಡಿಸಿದ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಾಥೂರಾಮ್ ಗೋಡ್ಸೆ ಹೆಸರಿನ ಫಲಕ ಹಾಕಿರುವುದು ದೇಶದ್ರೋಹದ ಕೃತ್ಯವಾಗಿದೆ. ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕನ ಹೆಸರಿನ ಫಲಕ ಹಾಕಿರುವುದು ದುರಂತ. ನಾಥೂರಾಮ್ ಗೋಡ್ಸೆಯನ್ನು ವೈಭವಿಕರಿಸುವ ಒಂದು ಸಂಘಟನೆಯಿಂದಲೇ ಈ ಕೃತ್ಯ ನಡೆದಿರುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಮಾಜದ ಶಾಂತಿ ನೆಮ್ಮದಿಯನ್ನು ಕದಡಿಸುವ ಬೇರೆ ಬೇರೆ ಕೆಲಸಗಳು ಬೇರೆ ಬೇರೆ ಮೂಲಗಳಿಂದ ನಡೆಯುತ್ತಿವೆ. ಶಾಂತಿಯುತ ಜಿಲ್ಲೆಯಲ್ಲಿ ಭಯೋತ್ಪಾದನೆ ಹುಟ್ಟಿಸಲು ಈ ರೀತಿಯ ಕೆಲಸ ಮಾಡಲಾಗುತ್ತಿದೆ. ಆದುದರಿಂದ ಇದರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳ ಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ದಿನೇಶ್ ಪುತ್ರನ್, ಬಿ.ಕುಶಲ ಶೆಟ್ಟಿ, ಪ್ರಖ್ಯಾತ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ನಾಗೇಶ ಕುಮಾರ್ ಉದ್ಯಾವರ, ರಮೇಶ್ ಕಾಂಚನ್, ಅಣ್ಣಯ್ಯ ಸೇರಿಗಾರ್, ಅಲೆವೂರು ಹರಿಶ್ ಕಿಣಿ, ಕೀರ್ತಿ ಶೆಟ್ಟಿ, ಇಸ್ಮಾಯಿಲ್ ಅತ್ರಾಡಿ, ಉಪೇಂದ್ರ ಮೆಂಡನ್, ಲೂಯಿಸ್ ಲೊಬೋ, ಸಾಯಿರಾಜ್, ಅಹ್ಮದ್ ಮೊದಲಾದ ಉಪಸ್ಥಿತರಿದ್ದರು.