ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ; ಆರೋಪಿ ಗಣೇಶ್ ಶೆಟ್ಟಿ ಜಾಮೀನು ಅರ್ಜಿ ತಿರಸ್ಕೃತ

ಮೊಳಹಳ್ಳಿ ಗಣೇಶ್ ಶೆಟ್ಟಿ
ಕುಂದಾಪುರ : ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ ಯಾನೆ ಗೋಪಾಲಕೃಷ್ಣ ರಾವ್ ಆತ್ಮಹತ್ಯೆ ಪ್ರಕರಣದ ಬಂಧಿತ ಆರೋಪಿ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬಾತನ ಜಾಮೀನು ಅರ್ಜಿಯನ್ನು ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಈ ಪ್ರಕರಣ ಬಹುಕೋಟಿ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದ್ದು, ಕಟ್ಟೆ ಭೋಜಣ್ಣ ಆರೋಪಿ ಮನೆಯಲ್ಲಿಯೇ ಪಿಸ್ತೂಲಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಪೊಲೀಸ್ ಠಾಣೆಯ ಎಸ್ಎಚ್ಓರನ್ನು ಪ್ರಸ್ತಾಪಿಸಿ ಡೆತ್ನೋಟ್ ಬರೆದಿರುವುದರಿಂದ ಆರೋಪಿಗೆ ಜಾಮೀನು ನೀಡಬಾರದೆಂದು ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದಾರೆ.
ಪ್ರಾಸಿಕ್ಯೂಶನ್ ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್, ಆರೋಪಿ ಸಲ್ಲಿಸಿದ ಜಾಮೀನು ಅರ್ಜಿ ಯನ್ನು ತಿರಸ್ಕರಿಸಿದ್ದಾರೆ.
ಕಟ್ಟೆ ಭೋಜಣ್ಣ ಮೇ 26ರಂದು ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಯ ಸಿಟೌಟ್ನಲ್ಲಿ ತನ್ನದೇ ಪಿಸ್ತೂಲಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಭೋಜಣ್ಣ ಬರೆದಿಟ್ಟಿದ್ದರೆನ್ನಾದ ಡೆತ್ ನೋಟ್ನಲ್ಲಿ ಉಲ್ಲೇಖಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಗಣೇಶ ಶೆಟ್ಟಿ ಮೊಳಹಳ್ಳಿ ಹಾಗೂ ಎಚ್. ಇಸ್ಮಾಯಿಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಎಚ್.ಇಸ್ಮಾಯಿಲ್ ತಲೆಮರೆಸಿಕೊಂಡಿದ್ದು ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಮೂಲಕ ನ್ಯಾಯಾಲಯಕ್ಕೆ ನಿರಿಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಜಾಮೀನು ಕೋರಿ ವಾದ ಮಂಡಿಸಲಾಗಿದೆ.