ಲೋಕಾಯುಕ್ತರ ನೇಮಕ ಕೋರಿ ಅರ್ಜಿ; ಒಂದು ವಾರದಲ್ಲಿ ಮಾಹಿತಿ ಸಿಗಲಿದೆ: ಹೈಕೋರ್ಟ್ ಸಿಜೆ

ಬೆಂಗಳೂರು, ಜೂ.7: ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೈಕೋರ್ಟ್ ಸಿಜೆ ಅವರ ಸಲಹೆಯನ್ನು ಪಡೆದುಕೊಂಡಿದೆ. ಈ ಬಗ್ಗೆ ಒಂದು ವಾರದಲ್ಲಿ ನಿಮಗೆ ಮಾಹಿತಿ ಸಿಗಲಿದೆ ಎಂದು ಹೈಕೋರ್ಟ್ ಅರ್ಜಿದಾರರಿಗೆ ತಿಳಿಸಿದೆ.
ಲೋಕಾಯುಕ್ತರ ನೇಮಕ ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ನಗರದ ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಮುಖ್ಯಮಂತ್ರಿ ಅವರು ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಈಗಾಗಲೇ ತಮಗೇ(ಸಿಜೆ) ಪತ್ರ ಬರೆದಿದ್ದಾರೆ. ಈ ಕುರಿತಂತೆ ಚರ್ಚೆಯೂ ನಡೆಯುತ್ತಿದೆ. ಈ ಬಗ್ಗೆ ಒಂದು ವಾರದಲ್ಲಿ ನಿಮಗೆ ಮಾಹಿತಿ ಸಿಗಲಿದೆ ಎಂದು ಅರ್ಜಿದಾರರಿಗೆ ತಿಳಿಸಿದೆ.
ವಿವರಣೆ: ಲೋಕಾಯುಕ್ತ ಕಾಯ್ದೆಯ ಪ್ರಕಾರ, ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್ ಒಂದರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದವರು ಅಥವಾ ಹೈಕೋರ್ಟ್ ಒಂದರಲ್ಲಿ ಕನಿಷ್ಠ ಹತ್ತು ವರ್ಷಗಳ ಕಾಲ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿವರನ್ನು ರಾಜ್ಯದ ಲೋಕಾಯುಕ್ತರನ್ನಾಗಿ ನೇಮಕ ಮಾಡಬಹುದು.
ಮುಖ್ಯಮಂತ್ರಿಯು ಲೋಕಾಯುಕ್ತರನ್ನು ನೇಮಕ ಮಾಡುವ ಮುನ್ನ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ವಿಧಾನಸಭೆಯ ಅಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ, ವಿಧಾನಸಭೆ ಮತ್ತು ವಿಧಾನ ಪರಿಷತ್‍ನ ವಿರೋಧ ಪಕ್ಷಗಳ ನಾಯಕರ ಸಲಹೆಯನ್ನು ಪಡೆಯಬೇಕು.







