ಚಿಕ್ಕಮಗಳೂರು; ಕಾಲೇಜು ಸೀಟು ಹಂಚಿಕೆಯಲ್ಲಿ ತಾರತಮ್ಯ ಆರೋಪ: ಕ್ರಮಕ್ಕೆ ದಸಂಸ ಆಗ್ರಹ

ಚಿಕ್ಕಮಗಳೂರು, ಜೂ.7: ನಗರದ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪ.ಜಾತಿ, ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡ ಮಕ್ಕಳಿಗೆ ಸೀಟು ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಮಹಾ ಒಕ್ಕೂಟದ ಮುಖಂಡರು ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಸಂಬಂಧ ಇಲಾಖೆಯ ಉಪನಿರ್ದೇಶಕ ಪುಟ್ಟನಾಯಕ್ ಅವರಿಗೆ ಮನವಿ ಸಲ್ಲಿಸಿದ ದಸಂಸ ಮಹಾ ಒಕ್ಕೂಟ ಪದಾಧಿಕಾರಿಗಳು, ಕಾಲೇಜಿನಲ್ಲಿ ಬಡ ಮಕ್ಕಳಿಗೆ ಸೀಟು ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಾಲೇಜಿನಲ್ಲಿ ಸೀಟು ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ಸೇರಿದಂತೆ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಕಾಲೇಜಿನಲ್ಲಿ ಸೀಟ್ ದೊರೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ವಾಣಿಜ್ಯ ವಿಭಾಗಕ್ಕೆ ಸೇರಿಸಲು ತೆರಳಿದರೆ ಬೋಧಕರು ಇಲ್ಲ ಎಂದು ಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಕಲಾ ವಿಭಾಗಕ್ಕೆ ಕೇಳಿದರೆ ಶೇಕಡವಾರು ಅಂಕವಿಲ್ಲ, ಎಲ್ಲಾ ಸೀಟುಗಳು ಭರ್ತಿಯಾಗಿವೆ ಎಂದು ಕುಂಟು ನೆಪಗಳನ್ನು ಹೇಳಿಕೊಂಡು ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಮಕ್ಕಳಿಗೆ ಸೀಟು ನೀಡದೇ ಸತಾಯಿಸುತ್ತಿರುವ ಕಾಲೇಜು ಸಿಬ್ಬಂದಿ ವಿರುದ್ಧ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರಕಾರಿ ಶಾಲೆ ಹಾಗೂ ಕಾಲೇಜುಗಳು ಎಸ್ಸಿ,ಎಸ್ಟಿ ಹಾಗೂ ಬಡ ವಿದ್ಯಾರ್ಥಿಗಳಿಂದಲೇ ಉಳಿದಿದೆ. ಇಂತಹ ಸಂದರ್ಭದಲ್ಲಿ ಆ ವರ್ಗದ ಮಕ್ಕಳಿಗೆ ಪ್ರವೇಶ ನೀಡದೆ ವಂಚಿಸಲಾಗುತ್ತಿದೆ. ಆದ್ದರಿಂದ ಅರ್ಹ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶ ನೀಡದಿದ್ದಲ್ಲಿ ಜಿಲ್ಲೆಯಾದ್ಯಂತ ಒಕ್ಕೂಟದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಹೊನ್ನಪ್ಪ ಯಲಗುಡಿಗೆ, ಮೋಹನ್ ಕಬ್ಬಿಗೆರೆ, ಆರದವಳ್ಳಿ ಮೋಹನ್, ಮುಖಂಡರಾದ ಎ.ಯು.ಪ್ರಕಾಶ್, ರಜನಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.







