ಪ್ರವಾದಿ ವಿರುದ್ಧದ ಹೇಳಿಕೆ ವಿವಾದ: ವಕ್ತಾರರಿಗೆ ಕಟ್ಟುಪಾಡುಗಳನ್ನು ವಿಧಿಸಿದ ಬಿಜೆಪಿ

ಹೊಸದಿಲ್ಲಿ, ಜೂ. 7: ಪ್ರವಾದಿ ಮುಹಮ್ಮದ್ ಕುರಿತು ತನ್ನ ನಾಯಕಿ ನೂಪುರ್ ಶರ್ಮಾ ನೀಡಿದ ಹೇಳಿಕೆಯಿಂದ ಸರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ಎದುರಿಸಿದ ಹಿನ್ನೆಲೆಯಲ್ಲಿ ಟಿ.ವಿ. ಚರ್ಚೆಯಲ್ಲಿ ಪಾಲ್ಗೊಳ್ಳುವ ತನ್ನ ವಕ್ತಾರರು ಹಾಗೂ ನಾಯಕರಿಗೆ ಆಡಳಿತಾರೂಢ ಬಿಜೆಪಿ ಕೆಲವು ಕಟ್ಟುಪಾಡುಗಳನ್ನು ವಿಧಿಸಿದೆ.
ಅಧಿಕೃತ ವಕ್ತಾರರು ಹಾಗೂ ನಾಯಕರು ಮಾತ್ರ ಟಿ.ವಿ. ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಅವರನ್ನು ಪಕ್ಷದ ಮಾಧ್ಯಮ ಘಟಕ ನಿಯೋಜಿಸಲಿದೆ. ಯಾವುದೇ ಧರ್ಮ, ಅದರ ಸಂಕೇತಗಳು ಅಥವಾ ಧಾರ್ಮಿಕ ವ್ಯಕ್ತಿಗಳನ್ನು ಟೀಕಿಸದಂತೆ ವಕ್ತಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಸಿಬಿಸಿ ಚರ್ಚೆಯ ಸಂದರ್ಭ ಬಿಜೆಪಿಯಿಂದ ಚರ್ಚಾಗೋಷ್ಠಿಗೆ ನಿಯೋಜಿತರಾದವರು ಕಟ್ಟುಪಾಡುಗಳನ್ನು ಉಲ್ಲಂಘಿಸುವುದನ್ನು ನಿಷೇಧಿಸಲಾಗಿದೆ. ಅವರು ತಮ್ಮ ಭಾಷೆಯನ್ನು ನಿಯಂತ್ರಿಸಿಕೊಳ್ಳುವಂತೆ ಹಾಗೂ ಉದ್ವೇಗಕ್ಕೆ ಒಳಗಾಗದಂತೆ ಆಗ್ರಹಿಸಲಾಗಿದೆ. ಯಾವುದೇ ಪ್ರಚೋದನೆಗೆ ಒಳಗಾಗಿ ಅವರು ಪಕ್ಷದ ಸಿದ್ಧಾಂತವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಟಿ.ವಿ. ಚರ್ಚೆಯ ವಿಷಯವನ್ನು ಮೊದಲು ಪರಿಶೀಲಿಸಿ. ಅದಕ್ಕಾಗಿ ಸಿದ್ಧತೆ ಮಾಡಿ ಹಾಗೂ ಯಾವುದೇ ವಾಹಿನಿಯ ಮುಂದೆ ಕಾಣಿಸಿಕೊಳ್ಳುವ ಮೊದಲು ಪಕ್ಷದ ಸಿದ್ಧಾಂತವನ್ನು ಅನುಸರಿಸಿ ಎಂದು ಬಿಜೆಪಿ ತನ್ನ ವಕ್ತಾರರಿಗೆ ಆದೇಶಿಸಿದೆ. ಪಕ್ಷದ ವಕ್ತಾರರು ಹಾಗೂ ಚರ್ಚೆಗೆ ನಿಯೋಜಿತರಾದವರು ಕಾರ್ಯಸೂಚಿಗೆ ಬದ್ದರಾಗಿರಬೇಕು. ಅವರು ಯಾವುದೇ ಬಲೆಗೆ ಬೀಳಬಾರದು ಎಂದು ಮೂಲಗಳು ತಿಳಿಸಿವೆ.







