ಎರಡು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಪ್ರಕರಣ ದಾಖಲು
ದಾರಿ ತಪ್ಪಿಸುವ ಸುದ್ದಿಗಳ ಮೂಲಕ ಕೋಮು ಉನ್ಮಾದಕ್ಕೆ ಪ್ರಚೋದನೆ

ಹೊಸದಿಲ್ಲಿ,ಜೂ.7: ಉತ್ತರ ಪ್ರದೇಶದ ಬರೇಲಿಯಲ್ಲಿ ಕರ್ಫ್ಯೂ ಹೇರಿಕೆ ಮತ್ತು ಗಲಭೆಗಳ ಕುರಿತು ‘ದಾರಿ ತಪ್ಪಿಸುವ’ ಸುದ್ದಿಗಳನ್ನು ತೋರಿಸುವ ಮೂಲಕ ಕೋಮು ಉನ್ಮಾದವನ್ನು ಪ್ರಚೋದಿಸುತ್ತಿದ್ದ ಆರೋಪದಲ್ಲಿ ಎರಡು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಅವುಗಳನ್ನು ನಿರ್ಬಂಧಿಸಿದ್ದಾರೆ.
ಆರ್‌ಎ ನಾಲೆಡ್ಜ್ ವರ್ಲ್ಡ್ ಮತ್ತು ಬರೇಲಿ ಪ್ರೊಡಕ್ಷನ್ ಹೆಸರಿನ ಈ ಎರಡು ಚಾನೆಲ್‌ಗಳ ವಿರುದ್ಧ ಜೂ.6ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಬರೇಲಿಯ ಎಸ್ಎಸ್ಪಿ ರೋಹಿತಸಿಂಗ್ ಸಜ್ವಾನ್ ತಿಳಿಸಿದರು. ಎರಡೂ ಚಾನೆಲ್‌ಗಳು ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡಿದ್ದವು ಮತ್ತು ನಗರದಲ್ಲಿಯ ಕೋಮು ಸ್ಥಿತಿಯನ್ನು ಹದಗೆಡಿಸಲು ಪ್ರಯತ್ನಿಸಲಾಗಿತ್ತು ಎಂದು ಪ್ರಕರಣ ದಾಖಲಾಗಿರುವ ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಹಿಮಾಂಶು ನಿಗಮ್ ಹೇಳಿದರು.ಆಡಳಿತವು ಎಲ್ಲ ಬೆಳವಣಿಗೆಗಳ ಮೇಲೆ ನಿಕಟ ನಿಗಾಯಿರಿಸಿದೆ ಎಂದು ಬರೇಲಿ ಜಿಲ್ಲಾ ದಂಡಾಧಿಕಾರಿ ಶಿವಕಾಂತ ತಿಳಿಸಿದರು.ಜೂ.3ರಂದು ನಡೆದಿದ್ದ ಕಾನ್ಪುರ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಯೂಟ್ಯೂಬ್ ಚಾನೆಲ್‌ಗಳು ಸುದ್ದಿಗಳನ್ನು ಪ್ರಸಾರಿಸಿದ್ದವು.





