VIDEO- ಚಡ್ಡಿ ತಲೆ ಮೇಲಿಟ್ಟುಕೊಂಡು ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ ಬಿಜೆಪಿಗರು ಪೊಲೀಸ್ ವಶ

ಬೆಂಗಳೂರು, ಜೂ.7: ಆರೆಸ್ಸೆಸ್ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಖಂಡಿಸಿ ಚಡ್ಡಿಗಳನ್ನು ತಲೆ ಮೇಲಿಟ್ಟು ವಿನೂತನವಾಗಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಮಂಗಳವಾರ ಇಲ್ಲಿನ ಕುಮಾರಕೃಪಾ ಗಾಂಧಿಭವನದ ಮುಂಭಾಗ ಬಿಜೆಪಿ ರಾಜ್ಯ ಘಟಕದ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ನಾಯಕರು, ತಲೆ ಮೇಲೆ ಚಡ್ಡಿಗಳನ್ನು ಇಟ್ಟುಕೊಂಡು ಪ್ರದರ್ಶಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಬಳಿಕ, ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ವೇಳೆ ಪೊಲೀಸರು ವಶಕ್ಕೆ ಪಡೆದು, ವಾಹನದಲ್ಲಿ ಕರೆದೊಯ್ದರು.
ಇದಕ್ಕೂ ಮೊದಲು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಚಡ್ಡಿ ಹಾಕುವವರು ಮಿಲಿಟರಿಯಲ್ಲೂ ಇದ್ದಾರೆ, ಪೊಲೀಸರಲ್ಲೂ ಇದ್ದಾರೆ, ರೈತರೆಲ್ಲರೂ ಹಾಕೋದು ಚಡ್ಡಿ. ಆದರೆ, ಎಲ್ಲರನ್ನೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ ಎಂದರು.
ಆರೆಸ್ಸೆಸ್ ಕೂಡ ಈಗ ಚಡ್ಡಿಯಲ್ಲಿಲ್ಲ. ಚಡ್ಡಿ ಎನ್ನುವುದು ಮಾನವ ಕುಲದ ಗೌರವ ಕಾಪಾಡುವ ಸಂಕೇತವಾಗಿದೆ. ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದ ಎಲ್ಲವನ್ನೂ ಕಿತ್ತುಕೊಂಡಿದ್ದಾರೆ. ಇರುವ ಚಡ್ಡಿಯನ್ನು ಕಿತ್ತು ಏಕೆ ಬೆತ್ತಲೆ ಆಗುತ್ತೀರಾ ಎಂದು ವ್ಯಂಗ್ಯವಾಡಿದರು.







