ಕೆಪಿಎಸ್ಸಿ ಹೀಗೇಕೆ?
ಮಾನ್ಯರೇ,
ಯುಪಿಎಸ್ಸಿ ನಡೆಸುವ ಪರೀಕ್ಷೆಗಳ ಫಲಿತಾಂಶ ನಿಗದಿಯಂತೆ ಯಾವುದೇ ಭ್ರಷ್ಟಾಚಾರ, ಪಕ್ಷಪಾತವಿಲ್ಲದೆ ಅಭ್ಯರ್ಥಿಗಳಿಗೆ ಸುಗಮವಾಗಿ ಸಿಗುತ್ತದೆ. ಆದರೆ ಕೆಪಿಎಸ್ಸಿ? ಇಲ್ಲಿ ಅರ್ಹತೆ, ಮಾನದಂಡಕ್ಕಿಂತ ಹೆಚ್ಚಾಗಿ ಇಂತಿಂತಹ ಹುದ್ದೆಗೆ ಇಷ್ಟಿಷ್ಟು ಹಣದ ಬೇಡಿಕೆ, ಪ್ರಭಾವಿಗಳ ಪ್ರಭಾವ ಬಳಕೆ ಎದ್ದು ಕಾಣುತ್ತದೆ.
ಯಾವುದೇ ಒಬ್ಬ ಅಭ್ಯರ್ಥಿ ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಫಲಿತಾಂಶ ಪ್ರಕಟವಾಗಿ ಎಲ್ಲಾ ಪ್ರಕ್ರಿಯೆಗಳು ಮುಗಿಯಲು 2ರಿಂದ 4 ವರ್ಷ ಹಿಡಿಯುತ್ತದೆ. ಇಷ್ಟೊಂದು ತಡವಾಗಲು ಕಾರಣವಾದರೂ ಏನು..? ಆಯೋಗವು ಅಧಿಸೂಚನೆ ಹೊರಡಿಸುವ ಮುನ್ನ ಇಷ್ಟು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸರಕಾರದ ಮಟ್ಟದಲ್ಲಿ ಅಂಗೀಕಾರ ಪಡೆದಿರುವುದಿಲ್ಲವೇ..? ಅರ್ಥವಾಗದ ಕೆಪಿಎಸ್ಸಿ ನಡೆ ಅಭ್ಯರ್ಥಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಪೊಲೀಸ್, ಪ್ರಾಧ್ಯಾಪಕ ಮತ್ತು ಕೆಪಿಎಸ್ಸಿ ಪರೀಕ್ಷೆಯಲ್ಲಿ ಪ್ರತೀ ಸಲ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಕೇಂದ್ರಗಳ ಅಕ್ರಮಗಳ ಆರೋಪಗಳು ಕೇಳಿಬರುತ್ತದೆ. ಇವೆಲ್ಲವೂ ಪದೇ ಪದೇ ಪುನರಾವರ್ತನೆ ಆಗುತ್ತಿರುವುದರಿಂದ ಬಡ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಸರಕಾರಿ ಉದ್ಯೋಗದ ಮೇಲೆ ಭರವಸೆಯೇ ಕಳೆದು ಹೋಗಿದೆ. ರಾಜ್ಯವೇ ಬೆಚ್ಚಿ ಬಿದ್ದ, ಎಷ್ಟೋ ಅರ್ಹತೆ ಇಲ್ಲದವರು ಕೆಲಸ ಗಿಟ್ಟಿಸಿಕೊಂಡಿದ್ದ ಇತ್ತೀಚಿನ ಪಿಎಸ್ಸೈ ನೇಮಕಾತಿ ಹಗರಣದಂತೆ ಕಣ್ಣಿಗೆ ಕಾಣದ್ದು ಇನ್ನೂ ಎಷ್ಟು ಇರಬಹುದು.! ಊಹಿಸಲು ಸಾಧ್ಯವೆ.?
ಸರಕಾರದ ಸುಪರ್ದಿಯಲ್ಲಿರುವ ಲೋಕಸೇವಾ ಆಯೋಗ, ಪೊಲೀಸ್ ನೇಮಕಾತಿ, ಪಿಡಬ್ಲೂಡಿ, ಹಾಲಿನ ಮಂಡಳಿ, ಶಿಕ್ಷಣ ಇಲಾಖೆ, ವಿವಿಧ ಸಚಿವಾಲಯಗಳಲ್ಲಿ ನಡೆಯುವಂತಹ ನೇರ ನೇಮಕಾತಿ ಪ್ರಕ್ರಿಯೆಗಳೆಲ್ಲವೂ ಅತಿಯಾದ ಲಂಚತನ, ರಾಜಕಾರಣಿಗಳ ಪ್ರಭಾವ, ಭ್ರಷ್ಟಾಚಾರದ ಕೂಪವನ್ನೇ ಹೊತ್ತು ನಿಂತಿರುತ್ತವೆ.! ಕರ್ನಾಟಕದಲ್ಲಿ ಸರಕಾರಿ ಉದ್ಯೋಗ ಪಡೆಯಬೇಕಾದರೆ ಪ್ರತಿಭೆಯ ಮಾನದಂಡಕ್ಕಿಂತ ಹಣವಿದ್ದವರಿಗೆ ಮಾತ್ರ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಸದ್ಯ ಹಗರಣಗಳ ಸಂತೆ ಆಗಿರುವ ಕೆಪಿಎಸ್ಸಿಯನ್ನು ರದ್ದು ಮಾಡಬೇಕು! ಇಲ್ಲವೆ..? ಜಂಟಿ ಲೋಕಸೇವಾ ಆಯೋಗ ಪ್ರಾಧಿಕಾರ ರಚನೆ ಆಗಬೇಕಿದೆ.! ಅಥವಾ ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರದ ಬೇರನ್ನು ಕಿತ್ತು ಎಸೆಯುವ ಮೂಲಕ ಸಮಗ್ರ ಬದಲಾವಣೆ ತರಬೇಕಾಗಿದೆ.





