ಭಾರತದ ಜಿಡಿಪಿ ಪ್ರಗತಿ ದರ ಅಂದಾಜನ್ನು ಮತ್ತೆ ಕಡಿತಗೊಳಿಸಿದ ವಿಶ್ವಬ್ಯಾಂಕ್

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಗತಿ ದರದ ಅಂದಾಜನ್ನು ವಿಶ್ವಬ್ಯಾಂಕ್ ಶೇಕಡ 8ರಿಂದ 7.5ಕ್ಕೆ ಕಡಿತಗೊಳಿಸಿದೆ.
ಅತ್ಯಧಿಕ ಹಣದುಬ್ಬರದ ಪರಿಣಾಮ, ಪೂರೈಕೆ ಸರಣಿಯಲ್ಲಿ ವ್ಯತ್ಯಯ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷದ ಕಾರಣ ನೀಡಿ ಭಾರತದ ಪ್ರಗತಿ ದರ ಅಂದಾಜನ್ನು ಕುಗ್ಗಿಸಿದೆ ಎಂದು timesofindia.com ವರದಿ ಮಾಡಿದೆ.
"ಖಾಸಗಿ ವಲಯ ಮತ್ತು ಸರ್ಕಾರದ ನಿಶ್ಚಿತ ಹೂಡಿಕೆ ಪ್ರಗತಿಗೆ ಪೂರಕವಾಗಲಿದ್ದು, ಇದು ವ್ಯವಹಾರ ವಾತಾವರಣವನ್ನು ಸುಧಾರಿಸಲು ಉತ್ತೇಜನ ನೀಡಲಿದೆ. ಈ ಹಿಂದೆ ಜನವರಿಯಲ್ಲಿ ಮಾಡಿದ್ದ ಅಂದಾಜಿಗಿಂತ ಹೊಸ ಪರಿಷ್ಕೃತ ಅಂದಾಜು ಶೇಕಡ 1.2ರಷ್ಟು ಕಡಿಮೆ. ಭಾರತದ ದೀರ್ಘಾವಧಿ ಪ್ರಗತಿ ಅವಕಾಶಗಳ ಹಿನ್ನೆಲೆಯಲ್ಲಿ 2024ನೇ ಹಣಕಾಸು ವರ್ಷದಲ್ಲಿ ಶೇಕಡ 7.1ರ ದರದಲ್ಲಿ ಅಭಿವೃದ್ಧಿಯ ನಿರೀಕ್ಷೆ ಇದೆ" ಎಂದು ವಿಶ್ವಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
2022-23ನೇ ಹಣಕಾಸು ವರ್ಷದಲ್ಲಿ ಅಂದಾಜಿಸಿದ್ದ 8.7ರ ಪ್ರಗತಿಯನ್ನು ಹೆಚ್ಚುತ್ತಿರುವ ಹಣದುಬ್ಬರ ಮತ್ತು ಪೂರೈಕೆ ಸರಣಿ ವ್ಯತ್ಯಯದ ಕಾರಣ ನೀಡಿ ಕಳೆದ ಏಪ್ರಿಲ್‍ನಲ್ಲಿ ಶೇಕಡ 8ಕ್ಕೆ ಕಡಿತಗೊಳಿಸಲಾಗಿತ್ತು. ಕೋವಿಡ್ ಲಾಕ್‍ಡೌನ್ ಪರಿಣಾಮದಿಂದ ಭಾರತ ಕ್ಷಿಪ್ರವಾಗಿ ಚೇತರಿಸಿಕೊಂಡಿದೆ. ಆದರೆ ಉಕ್ರೇನ್ ಯುದ್ಧ ಮತ್ತೊಂದು ಹೊಡೆತ ನೀಡಿದೆ. ಇದು ಬೆಲೆಯ ಒತ್ತಡವನ್ನು ಹೆಚ್ಚಿಸಿದ್ದು, ಆರ್‍ಬಿಐ ಬಡ್ಡಿದರವನ್ನು ಗಣನೀಯವಾಗಿ ಹೆಚ್ಚಿಸಿದೆ. 2021ನೇ ಆರ್ಥಿಕ ವರ್ಷದಲ್ಲಿ 6.6% ಕುಗ್ಗಿದ ಬಳಿಕ 2022ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ 8.7% ದರದಲ್ಲಿ ಬೆಳೆದಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ, ಭೌಗೋಳಿಕ-ರಾಜಕೀಯ ಸಂಘರ್ಷ ಮತ್ತು ಬೆಲೆ ಏರಿಕೆಯ ಕಾರಣದಿಂದ ಜಿಡಿಪಿ ಪ್ರಗತಿದರವನ್ನು ಶೇಕಡ 7.8ರಿಂದ ಶೇಕಡ 7.2ಕ್ಕೆ ಇಳಿಸಿತ್ತು.







