ಮಹಿಳಾ ಸೈಕ್ಲಿಸ್ಟ್ಗೆ ತರಬೇತುದಾರನಿಂದ ಕಿರುಕುಳ ಆರೋಪ: ಸ್ಲೊವೇನಿಯಾ ಪ್ರವಾಸದಿಂದ ಇಡೀ ಭಾರತೀಯ ತಂಡ ವಾಪಸ್

ಸಾಂದರ್ಭಿಕ ಚಿತ್ರ: facebook/OfficialCFI
ಹೊಸದಿಲ್ಲಿ: ಭಾರತೀಯ ಮಹಿಳಾ ಸೈಕಲ್ ಪಟು ಒಬ್ಬರು, ತಮ್ಮ ಕೋಚ್ ಕಿರುಕುಳ ನೀಡಿರುವುದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಎಸ್ಎಐ) ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ ರಾಷ್ಟ್ರೀಯ ಕೋಚ್ ಆರ್ಕೆ ಶರ್ಮಾ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಮೇ 29 ರಂದು ಸ್ಲೊವೇನಿಯಾ ಪ್ರವಾಸದ ವೇಳೆ ಶರ್ಮಾ ಸೈಕಲ್ ಪಟು ಅವರ ಕೋಣೆಗೆ ಬಲವಂತವಾಗಿ ಪ್ರವೇಶಿಸಿ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ.
ಎಸ್ಎಐಗೆ ನೀಡಿದ ದೂರಿನಲ್ಲಿ ಸೈಕ್ಲಿಸ್ಟ್ ತನ್ನನ್ನು "ತನ್ನ ಹೆಂಡತಿಯಾಗಲು" ಕೋಚ್ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ತಿಳಿದು ಬಂದಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ Ndtv ವರದಿ ಮಾಡಿದೆ.
ಎಸ್ಎಐ ಸೂಚನೆ ಮೇರೆಗೆ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಸಿಎಫ್ಐ) ಬುಧವಾರ ಸ್ಲೊವೇನಿಯಾ ಪ್ರವಾಸದಿಂದ ಇಡೀ ಭಾರತೀಯ ತಂಡವನ್ನು ಹಿಂತೆಗೆದುಕೊಂಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ದೂರಿನ ತನಿಖೆಗೆ ಸಂಬಂಧಿಸಿ SAI ಮತ್ತು CFI ನಿಂದ ಎರಡು ಪ್ರತ್ಯೇಕ ವಿಚಾರಣಾ ಸಮಿತಿಗಳು ರಚಿಸಲಾಗಿದೆ ಎಂದು ವರದಿಯಾಗಿದೆ.
"ಸೈಕಲ್ ಪಟುವಿನ ದೂರಿಗನುಗುಣವಾಗಿ, SAI ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರನ್ನು ತಕ್ಷಣವೇ ಭಾರತಕ್ಕೆ ಕರೆತಂದಿದೆ. ಹಾಗೂ ವಿಷಯವನ್ನು ಪರಿಶೀಲಿಸಲು ಸಮಿತಿಯನ್ನು ಸಹ ರಚಿಸಿದೆ." ಎಂದು ಭಾರತೀಯ ಕ್ರೀಡಾ ಪ್ರಾಧಿಕಾರವು ತಿಳಿಸಿದೆ.







