ಕಲಬುರಗಿ | ಊಟ ಕೇಳಿದಕ್ಕೆ ಮಗುವಿನ ಕೈಸುಟ್ಟು ಚಿತ್ರಹಿಂಸೆ ನೀಡಿದ ಮಲತಾಯಿ

ಕಲಬುರಗಿ, ಜೂ.8: ಊಟ ಕೇಳಿದ ಮಗುವಿನ ಕೈಗಳಿಗೆ ಮಲತಾಯಿ ಸೌದೆಯಿಂದ ಸುಟ್ಟು ಚಿತ್ರಹಿಂಸೆ ನೀಡಿ ಕ್ರೌರ್ಯ ಮೆರೆದಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.
ವಾಡಿ ಪಟ್ಟಣದ ಕೂಗಳತೆ ದೂರದಲ್ಲಿರುವ ನಾಲವಾರ ಸ್ಟೇಷನ್ ತಾಂಡದಲ್ಲಿ ಇಂತಹದೊಂದು ಅಮಾನವೀಯ ಕೃತ್ಯ ವರದಿಯಾಗಿದೆ.
ತಾಂಡಾ ನಿವಾಸಿ ತಿಪ್ಪಣ್ಣ ಎಂಬವರ ಪತ್ನಿ ಮರೆಮ್ಮ ಮಗುವಿಗೆ ಚಿತ್ರಹಿಂಸೆ ನೀಡಿದ ಆರೋಪಿಯಾಗಿದ್ದಾಳೆ. ತಿಪ್ಪಣ್ಣರ ಮೊದಲ ಪತ್ನಿ ಮೃತಪಟ್ಟಿದ್ದು, ನಾಲ್ಕು ವರ್ಷದ ಮಗು ಸೋನಾಲಿಕಾಳ ಆರೈಕೆಗೆಂದು ಇತ್ತೀಚಿಗೆ ಮರೆಮ್ಮಳನ್ನು ವಿವಾಹವಾಗಿದ್ದಾರೆ. ಮನೆಯಲ್ಲಿ ತಿಪ್ಪಣ್ಣ ಇರೋವರೆಗೆ ಮಲತಾಯಿ ಮರೆಮ್ಮ ಸೋನಾಲಿಕಾಳನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳಂತೆ. ಆದರೆ ದುಡಿಯಲು ಅಂತ ತಿಪ್ಪಣ್ಣಾ ಮಹಾರಾಷ್ಟ್ರದ ಪುಣೆಗೆ ಹೋಗುತ್ತಿದ್ದಂತ. ಮರೆಮ್ಮ ಮಗುವಿನ ಮೇಲೆ ಕ್ರೌರ್ಯ ಮೆರೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರೆಮ್ಮ ದಿನನಿತ್ಯ ಮಗುವಿಗೆ ಹೊಡೆಯುವುದು, ಹಿಂಸೆ ನೀಡುತ್ತಿದ್ದು, ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದರು ಅವರನ್ನು ಮರೆಮ್ಮ ದಬಾಯಿಸುತ್ತಿದ್ದಳೆನ್ನಾಗಿದೆ. ಕಳೆದ ರವಿವಾರ ಹಸಿವಿನಿಂದ ಬಳಲುತ್ತಿದ್ದ ಸೋನಾಲಿಕಾ ಊಟ ಕೇಳಿದಾಗ ಮರೆಮ್ಮ ಉರಿಯುವ ಬೆಂಕಿ ಕಟ್ಟಿಗೆಯಿಂದ ಮಗುವಿನ ಕೈಗಳ ಮೇಲೆ ಬರೆ ಎಳೆದಿದ್ದಾಳೆ. ಬಳಿಕ ಮಗುವನ್ನು ಕೋಣೆಯಲ್ಲಿ ಮಂಚಕ್ಕೆ ಕಟ್ಟಿ ಚಿತ್ರಹಿಂಸೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ಮೂರು ದಿನಗಳಿಂದ ಮಗು ಮನೆಯಿಂದ ಹೊರಗೆ ಬಾರದಿದ್ದಾಗ ಸಂಶಯಗೊಂಡ ಸ್ಥಳೀಯರು ಮನೆಯೊಳಗೆ ಹೋಗಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಸ್ಥಳೀಯರು ವಾಡಿ ಠಾಣೆಗೆ ಮಾಹಿತಿ ನೀಡಿ ಮರೆಮ್ಮನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.







