ಹಿಂದಿನ ಪಠ್ಯಕ್ರಮವನ್ನೇ ಮುಂದುವರಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಹುಬ್ಬಳ್ಳಿ, ಜೂ. 8: ‘ಪಠ್ಯ ಪುಸ್ತಕಗಳ ಪರಿಷ್ಕರಣೆ ಹೆಸರಿನಲ್ಲಿ ಮುಗ್ದ ಮಕ್ಕಳ ಮನಸ್ಸಿನ ಮೇಲೆ ಕೋಮು ಮತ್ತು ಜಾತಿಯ ವಿಷಬೀಜವನ್ನು ಬಿತ್ತದೆ, ರಾಜ್ಯ ಸರಕಾರ ಈ ಹಿಂದೆ ಇದ್ದ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿದ್ದ ಪಠ್ಯಕ್ರಮವನ್ನು ಮುಂದುವರಿಸಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಮಾಜ ಸುಧಾರಕರಾದ ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರು ಅವರಂತಹ ಮಹಾಪುರುಷರ ತತ್ವಗಳನ್ನು ಯಾವುದೇ ಕಾರಣಕ್ಕೂ ತಿರುಚುವುದು ಸರಿಯಲ್ಲ. ಅವರ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಒಪ್ಪುವಂತಹವುಗಳು' ಎಂದು ಪ್ರತಿಪಾದಿಸಿದರು.
‘ದೇಶ ಮತ್ತು ರಾಜ್ಯದಲ್ಲಿ ಧರ್ಮ-ಜಾತಿಯ ಹೆಸರಿನಲ್ಲಿ ದ್ವೇಷ, ವೈಷಮ್ಯ ಸೃಷ್ಟಿಸಲು ಆರೆಸ್ಸೆಸ್ ಮತ್ತು ಸಂಘ ಪರಿವಾರದ ಸಂಘಟನೆಗಳು ಮಾಡುತ್ತಿವೆ. ಹೀಗಾಗಿ ಅದನ್ನು ಖಂಡಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೆಸ್ಸೆಸ್ ‘ಚಡ್ಡಿ' ಸುಡುವ ಅಭಿಯಾನ ನಡೆಸುದಾಗಿ ತಿಳಿಸಿದ್ದಾರೆ. ಆದರೆ, ಬಿಜೆಪಿಯವರು ಅವರ ನಿವಾಸಕ್ಕೆ ಚಡ್ಡಿ ಹೊತ್ತು ಹೋಗುವ ಪ್ರತಿಭಟನೆ ನಡೆಸಿದ್ದು ಸಲ್ಲ' ಎಂದು ಈಶ್ವರ್ ಖಂಡ್ರೆ ಆಕ್ಷೇಪಿಸಿದರು.





