ಮಳೆಗಾಲದ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧ: ಅಣಕು ಕಾರ್ಯಾಚರಣೆ

ಅಣಕು ಕಾರ್ಯಾಚರಣೆ
ಕುಂದಾಪುರ : ಮಳೆಗಾಲದಲ್ಲಿ ಉಂಟಾಗುವ ನೆರೆ, ಪ್ರವಾಹ ಪರಿಸ್ಥಿತಿ ಯನ್ನು ಎದುರಿಸಲು ಕೈಗೊಳ್ಳಬೇಕಾದ ತುರ್ತು ಕಾರ್ಯಗಳು, ಇಲಾಖೆಯ ರಕ್ಷಣಾ ಕಾರ್ಯವೈಖರಿಯನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಕುಂದಾಪುರ ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗ ದೊಂದಿಗೆ ಅಣಕು ಪ್ರದರ್ಶನವನ್ನು ಬುಧವಾರ ಬಳ್ಕೂರು ವಾರಾಹಿ ನದಿ ತೀರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನೆರೆ ಸಂಭವಿಸಿದಾಗ ಅಗ್ನಿಶಾಮಕದಳದ ಕಾರ್ಯಾಚರಣೆ, ನೀರಿನಲ್ಲಿ ಕೊಚ್ಚಿ ಕೊಂಡು ಹೋಗುತ್ತಿರುವ ವ್ಯಕ್ತಿಗಳ ರಕ್ಷಣೆ, ಪ್ರಥಮ ಚಿಕಿತ್ಸೆ ಇತ್ಯಾದಿಗಳ ಪ್ರಾತ್ಯಕ್ಷಿಕೆ ಯನ್ನು ನೀಡಲಾಯಿತು. ‘ನೆರೆ, ಪ್ರಾಕೃತಿಕ ವಿಕೋಪ ಸಂದರ್ಭ ರಕ್ಷಣಾ ಕ್ರಮ, ಸಿದ್ದತೆ, ಕೈಗೊಳ್ಳಬೇಕಾದ ನಿರ್ಧಾರಗಳು ಸಾರ್ವಜನಿಕರಿಗೆ ಅರಿವಿದ್ದರೆ, ದುರಂತ ತಪ್ಪಿಸುವ ಜೊತೆ ಜೀವ ರಕ್ಷಣೆ ಮಾಡಲು ಸಾಧ್ಯ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಈ ಅಣಕು ಕಾರ್ಯಾಚರಣೆ ಉದ್ದೇಶವಾಗಿದೆ ಎಂದು ಕುಂದಾಪುರ ಅಗ್ನಿಶಾಮಕದಳ ಠಾಣಾಧಿಕಾರಿ ಬಾಬು ಶೆಟ್ಟಿ ತಿಳಿಸಿದರು.
ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಮಾತನಾಡಿ, ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪವಾಗಿ ಪ್ರವಾಹ ಹೆಚ್ಚಿದ್ದಾಗ ಸಮಸ್ಯೆ ಉಂಟಾದ ಸಂದರ್ಭ ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು, ಇಲಾಖೆ, ಅಗ್ನಿಶಾಮಕ ದಳದವರು ಹೇಗೆ ಪರಿಸ್ಥಿತಿಯನ್ನು ನಿಬಾಯಿಸುತ್ತಾರೆ ಎಂಬುದರ ಬಗ್ಗೆ ಸಾರ್ವಜನಿಕರ ಮುಂದೆ ಅಣಕು ಪ್ರದರ್ಶನದ ರೂಪದಲ್ಲಿ ತೋರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಳ್ಕೂರು ಗ್ರಾಪಂ ಅಧ್ಯಕ್ಷ ನಿಶ್ಚಿತ್ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಕುಂದಾಪುರ ಅಗ್ನಿಶಾಮಕದಳ ಠಾಣಾಧಿಕಾರಿ ಬಾಬು ಶೆಟ್ಟಿ, ಕುಂದಾಪುರ ವಲಯ ಶಿಕ್ಷಣಾಧಿಕಾರಿ ಅರುಣ ಕುಮಾರ್ ಶೆಟ್ಟಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಕಂಡ್ಲೂರು ಗ್ರಾಮಾಂತರ ಠಾಣಾಧಿಕಾರಿ ನಿರಂಜನ ಗೌಡ, ಎಸ್ಸೈ ಸುಹಾಸ್, ಬಳ್ಕೂರು ಗ್ರಾಪಂ ಪಿಡಿಒ ಸುಜಾತಾ, ಸದಸ್ಯರು, ಅಂಗನವಾಡಿ ಮೇಲ್ವಿ ಚಾರಕಿ ಭಾಗ್ಯವತಿ, ಪುರಸಭೆ ಪರಿಸರ ಅಭಿಯಂತರ ರಾಘವೇಂದ್ರ, ಸದಾನಂದ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.
ನದಿಗೆ ಬಿದ್ದ ವ್ಯಕ್ತಿಯ ರಕ್ಷಣೆ!
ವಾರಾಹಿ ನದಿಯಲ್ಲಿ ಬಿದ್ದ ವ್ಯಕ್ತಿಯನ್ನು ಕಾಪಾಡಿ, ಜೀವ ಉಳಿಸಿ ಎಂಬ ಕರೆ ಬಂದ ತಕ್ಷಣ ಸೈರನ್ ಹಾಕಿಕೊಂಡು ಸಮಾರೋಪಾದಿಯಲ್ಲಿ ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ಆಗಮಿಸಿತು. ಸಿಬ್ಬಂದಿಗಳು ತಕ್ಷಣ ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ನಾಜೂಕಾಗಿ ಎತ್ತಿ ರಕ್ಷಿಸಿ ಅಲ್ಲಿಂದ ಸ್ಟ್ರಕ್ಚರ್ ಮೂಲಕ ಅಂಬುಲೆನ್ಸ್ ವಾಹನಕ್ಕೆ ಹಾಕಿ ತುರ್ತು ಚಿಕಿತ್ಸೆಗೆ ಕಳಿಸುವ ಪ್ರಕ್ರಿಯೆಯನ್ನು ಅಣಕು ಕಾರ್ಯಾ ಚರಣೆಯಲ್ಲಿ ತೋರಿಸಲಾಯಿತು.
ಈ ವೇಳೆ ಸ್ಥಳೀಯ ಶಾಲಾ ಮಕ್ಕಳು ಹಾಜರಿದ್ದರು. ಅಣಕು ಪ್ರದರ್ಶನವಾದ್ದ ರಿಂದ ಒಂದಷ್ಟು ಖುಷಿ ಪಡುವ ಜೊತೆ ಪ್ರಾಕೃತಿಕ ವಿಕೋಪದ ವಿಚಾರಗಳನ್ನು ಕೂಡ ಮಕ್ಕಳು ತಿಳಿದುಕೊಂಡರು.