ಕರಾವಳಿಯಲ್ಲಿ ಜೂ.11ರಿಂದ ಭಾರೀ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ

ಫೈಲ್ ಫೋಟೊ
ಉಡುಪಿ : ಕರ್ನಾಟಕದ ಕರಾವಳಿಯುದ್ದಕ್ಕೂ ಜೂ.11ರಿಂದ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ನೀಡಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಜೂ.10ರವರೆಗೆ ಗುಡುಗು ಸಿಡಿಲಿನಿಂದ ಕೂಡಿದ ಬಿರುಗಾಳಿಯೊಂದಿಗೆ ಸಾಧಾರಣ ಮಳೆ ಸುರಿದರೆ, 11ರಿಂದ 13ರವರೆಗೆ ಕರಾವಳಿಯಾದ್ಯಂತ ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ 64.5 ಮಿ.ಮೀನಿಂದ 115.5ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಿಡಿಲಿನಿಂದ ಮೂರು ಮನೆಗಳಿಗೆ ಹಾನಿ: ನಿನ್ನೆ ಸಂಜೆಯ ವೇಳೆ ಸುರಿದ ಭಾರೀ ಮಳೆಯ ನಡುವೆ ಸಿಡಿಲಿನಿಂದ ಮೂರು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದ ಮೂರು ಮನೆಗಳಿಗೆ ತಲಾ 50 ಸಾವಿರ ರೂ. ನಷ್ಟ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ.
ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ಲಾರೆನ್ಸೊ ಡೊಮೆಲ್ಲೊ ಮನೆಗೆ, ಕುತ್ಪಾಡಿ ಗ್ರಾಮದ ಜಯರಾಮ ಎಂಬವರ ಮನೆಗೆ ಹಾಗೂ ಕಡೆಕಾರು ಗ್ರಾಮದ ಕರಿಯಪ್ಪ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಬಿರುಕುಗೊಂಡು ಹಾನಿಯಾಗಿರುವ ಬಗ್ಗೆ ವರದಿಗಳು ತಿಳಿಸಿವೆ.
ಮಳೆ ಪ್ರಮಾಣ: ಇಂದು ಬೆಳಗ್ಗೆ ೮:೩೦ಕ್ಕೆ ಮುಕ್ತಾಯಗೊಂಡಂತೆ ಹಿಂದಿನ ೨೪ ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ ೧೪ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ ೩೧.೪ಮಿ.ಮೀ., ಬ್ರಹ್ಮಾವರದಲ್ಲಿ ೧೩.೮ ಮಿ.ಮೀ., ಕಾಪು-೧೩.೪ ಮಿ.ಮೀ., ಕುಂದಾಪುರ ೧೨.೧ಮಿ.ಮೀ., ಬೈಂದೂರು-೧೩.೬ಮಿ.ಮೀ., ಕಾರ್ಕಳ-೮.೩ಮಿ.ಮೀ. ಹಾಗೂ ಹೆಬ್ರಿಯಲ್ಲಿ ೧೫.೭ಮಿ.ಮೀ. ಮಳೆ ಬಿದ್ದಿದೆ.







