ಶೇ.95ರಷ್ಟು ಜನರ ಅಭದ್ರತೆಗೆ ವ್ಯಾಪಾರಿಗಳ ಸ್ವಾರ್ಥ, ಹಿಂದುತ್ವ ಕಾರಣ: ವಕೀಲ ಎಸ್. ಬಾಲನ್

ಬೆಂಗಳೂರು, ಜೂ.8: ನಮ್ಮ ದೇಶದಲ್ಲಿ ಹಿಂದುತ್ವದ ಸಿದ್ಧಾಂತ ಹಾಗೂ ವ್ಯಾಪಾರಿಗಳ ಸ್ವಾರ್ಥದಿಂದಾಗಿ ಶೇ.95ರಷ್ಟು ಜನರು ಭದ್ರತೆಯಿಲ್ಲದೇ ಬದುಕುತ್ತಿದ್ದಾರೆ. ಬ್ರಾಹ್ಮಣತ್ವದ ಸಿದ್ಧಾಂತವನ್ನು ಮುಂದುವರೆಸಿಕೊಂಡು ಬಂದ ಶೇ.5ರಷ್ಟು ಜನರು ಸಿನಿಮಾ, ಮಾಧ್ಯಮ ರಂಗ, ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಹೈಕೋರ್ಟ್ ಹಿರಿಯ ವಕೀಲ ಬಾಲನ್ ಹೇಳಿದ್ದಾರೆ.
ಬುಧವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ಆಯೋಜಿಸಿದ್ದ ಮೊದಲನೇ ಬೆಂಗಳೂರು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಅಲೆಮಾರಿ ಜನಾಂಗ, ಬಡವರು ಬೆಂಗಳೂರಿನಂತಹ ಪ್ರದೇಶದಲ್ಲಿ ಪೌರ ಕಾರ್ಮಿಕರಾಗಿ, ಬಟ್ಟೆ ತಯಾರಿಕಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಾ ಸ್ಲಂಗಳಲ್ಲಿ 35 ಲಕ್ಷ ಜನರು ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ, ಹಿಂದುತ್ವ ಸಿದ್ಧಾಂತ ಹೇಳುವವರು, ವ್ಯಾಪಾರ ಮನೋಭಾವವುಳ್ಳ ಜನರು ಸಿನಿಮಾ ರಂಗ ಸೇರಿ ಹಲವು ರಂಗಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಟೀ ಪ್ಯಾಕೇಟ್ ಮಾರಾಟ ಮಾಡುತ್ತಿದ್ದ ಅದಾನಿಗೆ ನರೇಂದ್ರ ಮೋದಿ ಅವರು ಬ್ಯಾಂಕ್‍ನಲ್ಲಿ 6 ಸಾವಿರ ಕೋಟಿ ರೂ. ಸಾಲವನ್ನು ಕೊಡಿಸುವುದರ ಜತೆಗೆ, ಆಸ್ಟ್ರೇಲಿಯಾಗೆ ಕರೆದುಕೊಂಡು ಹೋಗಿ ಕಲ್ಲಿದ್ದಲು ವ್ಯಾಪಾರದ ಗುತ್ತಿಗೆ ಸಿಗುವಂತೆ ಮಾಡಿದರು. ಹೀಗಾಗಿ, ಇಂದು ಅದಾನಿ ಅವರು 10 ಲಕ್ಷ ಕೋಟಿ ರೂ.ವ್ಯವಹಾರವನ್ನು ನಡೆಸುತ್ತಿದ್ದಾರೆ. ಇದರ ಹಿಂದಿನ ರಹಸ್ಯ ಏನು ಅಂತಲೇ ಜನಸಾಮಾನ್ಯರಿಗೆ ಗೋತ್ತಾಗುವುದಿಲ್ಲ ಎಂದು ತಿಳಿಸಿದರು.
ಮತ್ತೊಂದು ಕಡೆ ಇದೇ ಅದಾನಿ ಅವರು ಮುಂಬೈ ವಿಮಾನ ನಿಲ್ದಾಣ ಸೇರಿ ಒಟ್ಟು ದೇಶದ 6 ವಿಮಾನ ನಿಲ್ದಾಣಗಳ ಗುತ್ತಿಗೆಯನ್ನು ಪಡೆದುಕೊಂಡು, ಆ ನಿಲ್ದಾಣಗಳಿಗೆ ಸ್ವಚ್ಛತಾ ಸಿಬ್ಬಂದಿ, ಆಹಾರದ ವ್ಯವಸ್ಥೆ ಒದಗಿಸುತ್ತಿದ್ದಾರೆ. ಬೇರೆ ಅವರು ಇಂತಹ ವಿಮಾನ ನಿಲ್ದಾಣಗಳನ್ನು ಗುತ್ತಿಗೆ ಪಡೆಯಲು ಹೋದರೆ ಅವರ ವಿರುದ್ಧ ಸುಳ್ಳು ಕೇಸ್‍ಗಳನ್ನು ಹಾಕಿ ಅವರನ್ನು ಬಂಧಿಸುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.
ಮುಕೇಶ್ ಅಂಬಾನಿ ಅವರು ರೈತರಿಂದ ಆರೂವರೆ ರೂಪಾಯಿಗೆ 1 ಕೆಜಿ ಗೋಧಿ ಎಂಬಂತೆ 40 ಲಕ್ಷ ಟನ್ ಗೋಧಿಯನ್ನು ಖರೀದಿಸಿ 32 ರೂ.ಗೆ ಮಾರುಕಟ್ಟೆಯಲ್ಲಿ ಗೋಧಿಯನ್ನು ಮಾರಾಟ ಮಾಡಿ ಲಕ್ಷಾಂತರ ಕೋಟಿ ಹಣವನ್ನು ಗಳಿಸಿ ಶ್ರೀಮಂತನಾದನು. ಸಾವಿರಾರು ಕೋಟಿ ರೂ.ವೆಚ್ಚದಲ್ಲಿ ಮನೆ ಕಟ್ಟಿಸುತ್ತಿದ್ದಾನೆ, ವಿಮಾನ ಖರೀದಿಸಿದ್ದಾನೆ. ಆದರೆ, ರೈತರು ಇನ್ನೂ ಬಡವರಾಗಿಯೇ ಇದ್ದಾರೆ ಎಂದು ತಿಳಿಸಿದರು.
ಪಿಎಸ್‍ಐ ನೇಮಕ ಪರೀಕ್ಷೆಯಲ್ಲಿ ವ್ಯಾಪಕ ಭಷ್ಟ್ರಾಚಾರ ನಡೆದಿದ್ದು, ಆರೆಸೆಸ್ಸ್ ಕಾರ್ಯಕರ್ತರನ್ನು ಬಿಟ್ಟು ಅಭ್ಯರ್ಥಿಗಳಿಂದ ಹಣ ಪಡೆಯಲಾಗಿದೆ. ಮತ್ತೊಂದು ಕಡೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶೇ.40ರಷ್ಟು ಕಮೀಷನ್ ಪಡೆದು, ಗುತ್ತಿಗೆಯನ್ನು ನೀಡುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ರಾಜ್ಯ ಗೌರವಾಧ್ಯಕ್ಷ ಪ್ರೊ.ನಗರಗೆರೆ ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ, ರಾಜ್ಯ ಗೌರವಾಧ್ಯಕ್ಷೆ ಗೌರಿ, ಜಿಲ್ಲಾ ಕಾರ್ಯದರ್ಶಿ ರವಿ ಮೋಹನ್, ಜಿಲ್ಲಾ ಅಧ್ಯಕ್ಷ ಸಿರಿಮನೆ ನಾಗರಾಜ್ ಉಪಸ್ಥಿತರಿದ್ದರು.







