ಪಠ್ಯ ಪರಿಷ್ಕರಣೆ ವಿವಾದ; ಸಚಿವ ಬಿ.ಸಿ ನಾಗೇಶ್ ಗೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಪತ್ರ

ಬೆಂಗಳೂರು. ಜೂ. 8: ‘ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ‘ನಮ್ಮ ಸಂವಿಧಾನ' ಪಾಠದಲ್ಲಿ ಸಂವಿಧಾನದ ಆತ್ಮವೆ ಆಗಿರುವ ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ' ಎಂದು ಸಂಬೋಧಿಸುವ ನಾಮಾಂಕಿತವನ್ನು ಕೈಬಿಟ್ಟಿರುವುದು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಎಸ್ಸಿ-ಎಸ್ಟಿ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಗೂ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
‘ಸಂವಿಧಾನ ಶಿಲ್ಪಿ' ಎಂದು ಸಂಬೋಧಿಸುವ ನಾಮಾಂಕಿತವನ್ನು ಕೈಬಿಟ್ಟಿರುವ ಪ್ರಮಾದವನ್ನು ಸರಿಪಡಿಸಿ ಹೊಸದಾಗಿ ಪಾಠವನ್ನು ಮುದ್ರಿಸುವುದಾಗಿ ಸಚಿವರು ಸೂಚನೆ ನೀಡಿರುವುದನ್ನು ಸ್ವಾಗತ್ತಿಸುತ್ತೇನೆ' ಎಂದು ತಿಳಿಸಿದ್ದಾರೆ.
‘ಡಾ.ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಏಕೆ ಸಂಬೋಧಿಸುತ್ತಾರೆಂಬುದನ್ನು ಸಂವಿಧಾನ ರಚನಾ ಸಮಿತಿ ಸದಸ್ಯರಲ್ಲಿ ಒಬ್ಬರಾದ ಟಿ.ಟಿ.ಕೃಷ್ಣಮಾಚಾರಿಯವರು ಸಂವಿಧಾನ ರಚನಾ ಸಭೆಯಲ್ಲಿ ದಾಖಲು ಮಾಡಿದ್ದು, ಪಠ್ಯದಲ್ಲಿ ರಾಜ್ಯ ಸರಕಾರ ಆ ವಿಚಾರವನ್ನೇ ಮುದ್ರಣ ಮಾಡುವುದರ ಮೂಲಕ ಅಂಬೇಡ್ಕರ್ ಅವರ ಬಗ್ಗೆ ಹೊಂದಿರುವ ಬದ್ಧತೆಯನ್ನು ಪ್ರದರ್ಶಿಸಬೇಕು' ಎಂದು ತಿಳಿಸಿದ್ದಾರೆ.







