ಸಚಿವ ಬಿ.ಸಿ.ನಾಗೇಶ್ ಒಬ್ಬ ಮಾತೃದ್ರೋಹಿ: ಪ್ರೊ. ರವಿವರ್ಮಕುಮಾರ್
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಮಟ್ಟದ ಸಮಾವೇಶ

ಬೆಂಗಳೂರು, ಜೂ.8: ಪಠ್ಯಕ್ರಮ ಮರುಪರಿಷ್ಕರಣೆಯ ಪುಸ್ತಕಗಳನ್ನು ಕಣ್ಣು ಮುಚ್ಚಿ ಮುದ್ರಣ ಮಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತೃದ್ರೋಹಿ ಎಂದು ಸಂವಿಧಾನ ತಜ್ಞ, ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಟೀಕಿಸಿದರು.
ಬುಧವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಪಠ್ಯಪುಸ್ತಕಗಳ ತಿರುಚುವಿಕೆಯ ವಿರುದ್ಧ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ತುಮಕೂರಿನ ಸಿದ್ಧಗಂಗಾ ಮಠದ ಕೃಪೆಯಿಂದಲೇ ಬಿ.ಸಿ.ನಾಗೇಶ್ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆದರೆ, ಸ್ವತಃ ಅವರೇ ಸಿದ್ಧಗಂಗಾ ಮಠಕ್ಕೆ ದ್ರೋಹ ಮಾಡಿದ್ದು, ಶತಾಯುಷಿ ಡಾ.ಶಿವಕುಮಾರ್ ಸ್ವಾಮೀಜಿ ಅವರ ಜೀವನ ಕುರಿತ ಪಠ್ಯ ಕೈಬಿಡಲಾಗಿದ್ದರೂ, ಕಣ್ಣು ಮುಚ್ಚಿಕೊಂಡು ಪುಸ್ತಕ ಮುದ್ರಣ ಮಾಡಲಾಗಿದೆ. ಇಂತಹ ಮನುಷ್ಯ ಮಾತೃದ್ರೋಹಿಯೇ ಸರಿ ಎಂದು ಹೇಳಿದರು.
ಸತ್ಯವನ್ನು ಮರೆಮಾಚುವುದೇ ಇಂದಿನ ಸರಕಾರದ ಧ್ಯೇಯವಾಗಿದೆ. ಇದು ಸ್ವಾಯತ್ತ ಸರಕಾರವೂ ಅಲ್ಲ, ಸಾರ್ವಭೌಮ ಸರಕಾರವೂ ಅಲ್ಲ ಇದು ನಾಗಪುರ ಮಾಲಕರ ಗುಲಾಮರ ಸರಕಾರವಾಗಿದೆ ಎಂದ ಅವರು, ಇವರಿಗೆ ಶಿಕ್ಷಣ, ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಬಗ್ಗೆ ಯಾವ ಕಾಳಜಿಯೂ ಇಲ್ಲ. ಪಠ್ಯಕ್ರಮ ಮರುಪರಿಷ್ಕರಣೆಯ ಕೆಲಸ ರಾತ್ರಿಹೊತ್ತು ಕನ್ನ ಹಾಕುವ ಕಳ್ಳರ ಕೆಲಸದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಹಂಪಿ ವಿವಿಯ ನಿವೃತ್ತ ಕುಲಪತಿ ಪ್ರೊ.ಮುರಿಗೆಪ್ಪ ಮಾತನಾಡಿ, ಇಂದಿನ ಪಠ್ಯಕ್ರಮದ ತಿರುಚುವಿಕೆಯ ಹಿಂದಿನ ಕಾರಣವೆಂದರೆ ಕೇಂದ್ರ ಸರಕಾರ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿ ಎನ್‍ಇಪಿ-2020. ಈ ನೀತಿಯ ಅನುಷ್ಠಾನಗೊಳಿಸುವುದರ ಭಾಗವಾಗಿಯೇ ಈ ರೀತಿಯ ಪಠ್ಯ ತಿರುಚುವಿಕೆ ನಡೆಯುತ್ತಿದೆ ಎಂದರು.
ಶಿಕ್ಷಣತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ಪಠ್ಯಕ್ರಮ ವಿಧಾನವೂ ಎಡವೂ ಆಗಬೇಕಿಲ್ಲ ಬಲವೂ ಆಗಬೇಕಿಲ್ಲ. ಅದು ಸಂವಿಧಾನದ ಆಶಯಗಳಿಗನುಗುಣವಾಗಿರಬೇಕು. ರಾತ್ರೋರಾತ್ರಿ ಕ್ಯಾಬಿನೆಟ್ ಮೂಲಕ ತರುವ ನೀತಿಗಳು ಅದು ಹೇಗೆ ಶಿಕ್ಷಣದ ಹಿತಾಸಕ್ತಿ ಕಾಪಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.
ಸಂವಿಧಾನದ ಚೌಕಟ್ಟಿಗನುಗುಣವಾಗಿ ಅದರ ಮೂಲ ಮೌಲ್ಯಗಳಿಗನುಗುಣವಾಗಿ ಬದಲಾವಣೆ ಬರಬೇಕು. ಆದರೆ ಇದನ್ನು ಸ್ವತಃ ಸರಕಾರವೇ ಅಲ್ಲಗಳೆಯುತ್ತಿದೆ. ಸರ್ವಾಧಿಕಾರಿ ಧೋರಣೆಯಿಂದ ಪಠ್ಯಕ್ರಮ ಬದಲಾಯಿಸುವುದು ಪ್ರಜಾಪ್ರಭುತ್ವ ವಿರೋಧಿ, ಅಪಾರದರ್ಶಕ ವಿಧಾನ ಮತ್ತು ಸಂವಿಧಾನ ವಿರೋಧಿಯಾದದ್ದು ಎಂದು ಹೇಳಿದರು.
ರೋಹಿತ್ ಚಕ್ರತೀರ್ಥ ಪಠ್ಯಪರಿಷ್ಕರಣಾ ಸಮಿತಿಗೆ ನೇಮಕ ಮಾಡಿದ ಪ್ರಕ್ರಿಯೆಯೇ ಅಸಂವಿಧಾನಿಕವಾಗಿದೆ. ಅಷ್ಟೇ ಅಲ್ಲದೆ, ಸಮರ್ಪಕ ಆದೇಶವಿಲ್ಲದೆ ಈ ಸಮಿತಿ ಕೆಲಸ ನಿರ್ವಹಿಸಿದೆ. ಮಾನಸಿಕವಾಗಿ ಅಸ್ವಸ್ಥರಿರುವರು ಮಾತ್ರವೇ ಇಲ್ಲಸಲ್ಲದ ವಿಚಾರಗಳನ್ನು ಪಠ್ಯಗಳಲ್ಲಿ ಸೇರಿಸಬಲ್ಲರು. ಆದ್ದರಿಂದ ಈ ಕೂಡಲೇ ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಈಗ ನಾವು ವಿಷವರ್ತುಲದಲ್ಲಿ ಸಿಲುಕಿದ್ದೇವೆ. ದೇಶಭಕ್ತಿಯ ಬದಲು ದ್ವೇಷಭಕ್ತಿ ಬೆಳೆಸುವ ಕೆಲಸ ಸರಕಾರ ಮಾಡುತ್ತಿದೆ. ವರ್ಣವ್ಯವಸ್ಥೆಯನ್ನು ದೃಢಗೊಳಿಸುವ ಹುನ್ನಾರವಾಗಿದೆ. ಹಲವು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾದವರೂ ಶಿಕ್ಷಣ ಪಡೆದು ಜಾಣರಾಗುತ್ತಿದ್ದಾರೆ. ಆದರೆ ಇವರ ಈ ಜ್ಞಾನವನ್ನೂ ಕಿತ್ತುಕೊಳ್ಳುವ ಕೆಲಸ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಶಾಸನಬದ್ಧ ಸರಕಾರ ಈಗ ನಡೆಯುತ್ತಿಲ್ಲ, ಅದು ಈಗ ಶಾಖೆಗಳಿಂದ ನಿರ್ದೇಶಿತವಾಗಿದೆ. ಶಾಖಾಪಾಠಗಳು ಶಾಲಾಪಾಠಗಳಾಗುತ್ತಿವೆ ಎಂದ ಅವರು, ರಾಜ್ಯ ಸರಕಾರ ಒಂದೆಡೆ ಪಠ್ಯಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದ್ದೇವೆ ಎನ್ನುತ್ತಿದೆ. ಇನ್ನೊಂದೆಡೆ ಅದೇ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸುತ್ತೇವೆ ಎಂಬ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ನುಡಿದರು.
ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಇದು ಕೇವಲ ಪಠ್ಯಕ್ರಮ ತಿರುಚುವಿಕೆಯ ಪ್ರಶ್ನೆಯಲ್ಲ, ಇದು ಹಿಂದೂ ರಾಷ್ಟ್ರ ನಿರ್ಮಾಣವಾಗಿಸುವ ಪ್ರಕ್ರಿಯೆಯ ಭಾಗವಾಗಿದೆ. ಇದುವರೆಗೆ ಬಂದ ಯಾವ ಪಠ್ಯದಲ್ಲೂ ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಕುರಿತ ಸ್ಪಷ್ಟ ತಿಳುವಳಿಕೆ ಇಲ್ಲದಂತಾಗಿದೆ. ಇದರಿಂದಾಗಿಯೇ ಇಂದು ಎಲ್ಲೆಡೆಯೂ ಜಾತಿ ಸಂಘಟನೆಗಳು ಪ್ರಬಲಗೊಳ್ಳುತ್ತಿವೆ ಎಂದರು.
ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ಈ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಒಬ್ಬರೇ ಪಠ್ಯ ಪರಿಷ್ಕರಣೆ ಮಾಡಿಲ್ಲ, ಅದು ತಜ್ಞರ ಸಮಿತಿಯಾಗಿತ್ತು. ಆದರೆ ರೋಹಿತ್ ಚಕ್ರತೀರ್ಥ ಎಲ್ಲಿ ಉಪನ್ಯಾಸಕರಾಗಿದ್ದರು ಎಂಬುದು ಮಂತ್ರಿಗಳಿಗೆ ಮತ್ತು ಸರಕಾರಕ್ಕೆ ಗೊತ್ತಿಲ್ಲ. ಇನ್ನೂ ಈ ಸಮಿತಿ ಎಂತಹ ಶಿಫಾರಸ್ಸು ನೀಡಲಿದೆ ಎಂದು ಪ್ರಶ್ನೆ ಮಾಡಿದರು.
ಎಐಡಿಎಸ್‍ಓನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಇದೀಗ ಭಗತ್ ಸಿಂಗ್, ಅಂಬೇಡ್ಕರ್ ಅವರಿಗೂ ಅವಮಾನ ಮಾಡುತ್ತಿದ್ದಾರೆ. ಇದರ ವಿರುದ್ಧ ಲೇಖಕರು, ಕವಿಗಳು ದ್ವನಿ ಎತ್ತುತ್ತಿರುವುದು ಈ ಸಮಾಜದ ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಸಮಿತಿಯ ಆಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸಂಸ್ಕøತದಲ್ಲಿಯೇ ಸಂಸ್ಕøತಿ ಇಲ್ಲ, ಅದು ಎಲ್ಲೆಡೆಯೂ ಇದೆ. ಈ ಬಹು ಸಂಸ್ಕೃತಿಯನ್ನು ಎತ್ತಿ ಹಿಡಿಯದಿದ್ದರೆ ಭಾರತ ತುಂಡು ತುಂಡಾಗುತ್ತದೆ. ಅಲ್ಲದೆ, ಹೇಳಹೆಸರಿಲ್ಲದ ಅನರ್ಹರನ್ನು ಸಮಿತಿಯ ಅಧ್ಯಕ್ಷರನ್ನಾಗಿಸಿದರೆ ಇಂತಹ ಗೊಂದಲಗಳೇ ಸೃಷ್ಟಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಾವೇಶದ ಅಧ್ಯಕ್ಷತೆಯನ್ನು ಶಿಕ್ಷಣ ಉಳಿಸಿ ಸಮಿತಿಯ ವಿ.ಎನ್.ರಾಜಶೇಖರ ವಹಿಸಿದ್ದರು. ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಪ್ರೊ.ಸೋಮಶೇಖರಪ್ಪ, ಎಸ್.ಸೋಮಶೇಖರಗೌಡ, ಮಹೇಶ ಎಸ್.ಜಿ, ರಾಜೇಶ ಭಟ್, ಐಶ್ವರ್ಯ ಸಿ.ಎಂ ಸೇರಿದಂತೆ ಪ್ರಮುಖರಿದ್ದರು.







