ಲಡಾಖ್ ಭಾಗದಲ್ಲಿ ಚೀನಾದ ಚಟುವಟಿಕೆ ಆತಂಕಕಾರಿ: ಅಮೆರಿಕಾದ ಜನರಲ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜೂ.8: ಭಾರತಕ್ಕೆ ಹೊಂದಿಕೊಂಡಿರುವ ತನ್ನ ಗಡಿಯ ಬಳಿ ಚೀನಾ ರಕ್ಷಣಾ ಮೂಲಸೌಕರ್ಯಗಳನ್ನು ಸ್ಥಾಪಿಸುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ ಮತ್ತು ಚಟುವಟಿಕೆಯ ಮಟ್ಟವು ಕಣ್ಣು ತೆರೆಸುವಂಥದ್ದಾಗಿದೆ ಎಂದು ಅಮೆರಿಕ ಸೇನೆಯ ಪೆಸಿಫಿಕ್ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ.ಫ್ಲಿನ್ ಅವರು ಬುಧವಾರ ಇಲ್ಲಿ ಹೇಳಿದರು.
ಮಂಗಳವಾರ ಭಾರತಕ್ಕೆ ಆಗಮಿಸಿರುವ ಫ್ಲಿನ್ ಸೇನಾ ಮುಖ್ಯಸ್ಥ ಜ.ಮನೋಜ್ ಪಾಂಡೆಯವರನ್ನು ಭೇಟಿಯಾಗಿ ಮಿಲಿಟರಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿದರು.ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ನಡವಳಿಕೆಯು ಸಹಾಯಕಾರಿಯಲ್ಲ ಎಂದು ಫ್ಲಿನ್ ಬೆಟ್ಟು ಮಾಡಿದರು.
2020,ಮೇ 5ರಂದು ಪೂರ್ವ ಲಡಾಖ್ನ ಪ್ಯಾಂಗಾಂಗ್ ತ್ಸೋ ಪ್ರದೇಶದಲ್ಲಿ ಉಭಯ ಪಡೆಗಳ ನಡುವೆ ಘರ್ಷಣೆಗಳು ನಡೆದಾಗಿನಿಂದ ಭಾರತ ಮತ್ತು ಚೀನಾ ನಡುವೆ ಗಡಿ ಬಿಕ್ಕಟ್ಟು ಉದ್ವಿಗ್ನಗೊಂಡಿದೆ. ಚೀನಾ ಪೂರ್ವ ಲಡಾಖ್ನಲ್ಲಿ ಎರಡನೇ ಸೇತುವೆಯನ್ನು ನಿರ್ಮಿಸುತ್ತಿದೆ ಮತ್ತು ಇದು ಪ್ರದೇಶಕ್ಕೆ ತನ್ನ ಪಡೆಗಳನ್ನು ತ್ವರಿತವಾಗಿ ಸಾಗಿಸಲು ಅದರ ಸೇನೆಗೆ ನೆರವಾಗುತ್ತದೆ ಎನ್ನುವುದು ಕಳೆದ ತಿಂಗಳು ಬೆಳಕಿಗೆ ಬಂದಿತ್ತು. ಭಾರತದೊಂದಿಗಿನ ಗಡಿಪ್ರದೇಶಗಳಲ್ಲಿ ರಸ್ತೆಗಳು ಮತ್ತು ವಸತಿ ಪ್ರದೇಶಗಳಂತಹ ಇತರ ಮೂಲಸೌಕರ್ಯಗಳನ್ನೂ ಚೀನಾ ನಿರ್ಮಿಸುತ್ತಿದೆ.
ವಿಯೆಟ್ನಾಂ ಮತ್ತು ಜಪಾನಿನಂತಹ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿಯ ವಿವಿಧ ದೇಶಗಳೊಂದಿಗೆ ಸಮುದ್ರ ಗಡಿ ವಿವಾದಗಳನ್ನೂ ಚೀನಾ ಹೊಂದಿದೆ. ಲಡಾಖ್ನಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟು ಕುರಿತು ಸುದ್ದಿಗಾರರು ಅಭಿಪ್ರಾಯ ಕೋರಿದಾಗ ಫ್ಲಿನ್,ಭಾರತದ ಗಡಿಗೆ ಹೊಂದಿಕೊಂಡಿರುವ ಚೀನಿ ಸೇನೆಯ ವೆಸ್ಟರ್ನ್ ಥಿಯೇಟರ್ ಕಮಾಂಡ್ನಲ್ಲಿ ಕೆಲವು ಮೂಲಸೌಕರ್ಯ ನಿರ್ಮಾಣಗಳು ಭಾರತದ ಪಾಲಿಗೆ ಎಚ್ಚರಿಕೆ ಗಂಟೆಯಾಗಿವೆ ಎಂದು ಉತ್ತರಿಸಿದರು.
ಎಲ್ಲ ಕ್ಷೇತ್ರಗಳಲ್ಲಿಯೂ ಚೀನಿ ಸೇನೆಯ ಯುದ್ಧೋಪಕರಣಗಳು ಕಂಡು ಬರುತ್ತಿರುವಾಗ ಅದರ ಅಗತ್ಯವೇನು ಎಂದು ಪ್ರಶ್ನಿಸಲೇಬೇಕು ಎಂದ ಫ್ಲಿನ್,‘ಭಾರತ-ಚೀನಾ ನಡುವಿನ ಗಡಿ ಬಿಕ್ಕಟ್ಟು ಹೇಗೆ ಅಂತ್ಯಗೊಳ್ಳುತ್ತದೆ ಮತ್ತು ಅದು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಭವಿಷ್ಯ ಹೇಳಲು ನನಗೆ ಸಾಧ್ಯವಿಲ್ಲ. ಇದೊಂದು ವೌಲಿಕ ಪ್ರಶ್ನೆಯಾಗಿದೆ ಮತ್ತು ಅವರ ಉದ್ದೇಶಗಳನ್ನು ತಿಳಿದುಕೊಳ್ಳಲು ಅವರ ಉತ್ತರವನ್ನು ಪಡೆಯಲು ಯತ್ನಿಸುತ್ತೇನೆ ’ಎಂದರು.
2014 ಮತ್ತು 2022ರ ನಡುವೆ ಚೀನಾದ ನಡವಳಿಕೆಯಲ್ಲಿ ಬದಲಾವಣೆಯ ಕುರಿತೂ ಮಾತನಾಡಿದ ಫ್ಲಿನ್,‘2014 ಮತ್ತು 2018ರ ನಡುವೆ 25ನೇ ಪದಾತಿ ವಿಭಾಗದ ಕಮಾಂಡರ್ ಆಗಿ ನಾನು ನೇತೃತ್ವ ವಹಿಸಿದ್ದೆ ಮತ್ತು ನಂತರ ಅಮೆರಿಕ ಆರ್ಮಿ ಪೆಸಿಫಿಕ್ ಕಮಾಂಡ್ನ ಉಪ ಕಮಾಂಡಿಂಗ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೆ. ಬಳಿಕ ನನ್ನನ್ನು ಮೂರು ವರ್ಷಗಳ ಅವಧಿಗೆ ಪೆಂಟಗನ್ ನಲ್ಲಿ ನಿಯೋಜಿಸಲಾಗಿತ್ತು ಮತ್ತು ಒಂದು ವರ್ಷದ ಹಿಂದೆ ನಾನು ಇಲ್ಲಿಗೆ ಮರಳಿದ್ದೇನೆ ’ಎಂದರು.
ಚೀನಿ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ (ಪಿಆರ್ಸಿ) ಆಗ ಏನು ಮಾಡಿದ್ದವು ಮತ್ತು ಈಗ ಏನು ಮಾಡುತ್ತಿವೆ ಎನ್ನುವುದನ್ನು ಹಿಂದಿರುಗಿ ನೋಡಿದಾಗ ಅವರು ಹೆಚ್ಚುತ್ತಿರುವ ಕಪಟ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದು ಹೇಳಬಹುದು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅವರ ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ನಡವಳಿಕೆಯು ಪೂರಕವಲ್ಲ ಎಂದ ಫ್ಲಿನ್,‘ಚೀನಿಯರ ಈ ಕೆಲವು ವಿನಾಶಕಾರಿ ಮತ್ತು ಭ್ರಷ್ಟ ನಡವಳಿಕೆಗೆ ಪ್ರತಿಯಾಗಿ ನಾವು ಒಂದಾಗಿ ಕಾರ್ಯಾಚರಿಸುವುದು ವೌಲಿಕವಾಗುತ್ತದೆ ಎಂದು ನಾನು ಭಾವಿಸಿದ್ದೇನೆ ’ಎಂದರು.