ಬೆಂಗಳೂರು | ವಿದ್ಯಾರ್ಥಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ: ಆರೋಪಿಯ ಬಂಧನ

ಬೆಂಗಳೂರು, ಜೂ.8: ಐದನೆ ತರಗತಿ ವಿದ್ಯಾರ್ಥಿಯನ್ನು ಅಪಹರಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.
ನೇಪಾಳ ಮೂಲದ ಗೌರವ್‍ಸಿಂಗ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಹೊರಮಾವು ನಿವಾಸಿ, ಬಿಎಂಟಿಸಿ ಚಾಲಕ ಸುಭಾಷ್ ಎಂಬುವರ 11 ವರ್ಷದ ಪುತ್ರ 5ನೆ ತರಗತಿ ಓದುತ್ತಿದ್ದು, ನಿನ್ನೆ ಸಂಜೆ ಮನೆ ಮುಂದೆ ಆಟವಾಡುತ್ತಿದ್ದಾಗ 5.30ರ ಸುಮಾರಿನಲ್ಲಿ ಮಹಿಳೆಯೊಬ್ಬರು ಬಾಲಕನನ್ನು ಅಪಹರಿಸಿಕೊಂಡು ಆಟೊದಲ್ಲಿ ಪರಾರಿಯಾಗಿ ಜಿಗಣಿಯ ಫಾರಂ ಹೌಸ್‍ನಲ್ಲಿ ಇಟ್ಟಿದ್ದಳು. ರಾತ್ರಿ 8.30ರ ಸುಮಾರಿನಲ್ಲಿ ವಿದ್ಯಾರ್ಥಿಯ ತಂದೆ ಸುಭಾಷ್ ಅವರಿಗೆ ಫೋನ್ ಕರೆ ಬಂದಿದ್ದು, 50 ಲಕ್ಷರೂ. ನೀಡಿದರೆ ನಿಮ್ಮ ಮಗನನ್ನು ಬಿಡುವುದಾಗಿ ಹೇಳಿದ್ದಾರೆ.
ಗಾಬರಿಯಾದ ಸುಭಾಷ್ ಅವರು ರಾತ್ರಿ 9.30ರ ಸುಮಾರಿನಲ್ಲಿ ಹೆಣ್ಣೂರು ಪೊಲೀಸ್ ಠಾಣೆಗೆ ಹೋಗಿ ಮಗ ಅಪಹರಣವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಭಾಷ್ ಅವರಿಗೆ ಬಂದಿದ್ದ ಫೋನ್ ಕರೆ ಆಧರಿಸಿ ತಕ್ಷಣ ಕಾರ್ಯಚರಣೆ ನಡೆಸಿ ಜಿಗಣಿಯ ಫಾರಂ ಹೌಸ್ ಬಳಿ ಬುಧವಾರ ಮುಂಜಾನೆ 2 ಗಂಟೆ ಸುಮಾರಿನಲ್ಲಿ ಬಾಲಕನನ್ನು ರಕ್ಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಮೂಲದ ಭದ್ರತಾ ಸಿಬ್ಬಂದಿನನ್ನು ಬಂಧಿಸಿ ಪರಾರಿಯಾಗಿರುವ ಮಹಿಳೆಗಾಗಿ ಶೋಧ ಮುಂದುವರೆಸಿದ್ದಾರೆ.







