ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ; ತಪಾಸಣಾ ಶಿಬಿರ
ಉಡುಪಿ, ಜೂ.೮: ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಎಡಿಐಪಿ ಯೋಜನೆಯಡಿ ಬೆಂಗಳೂರು ಅಲಿಮ್ಕೋ ಎಸಿಸಿ ವತಿಯಿಂದ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ವ್ಯಾಪ್ತಿಯ ವಿಕಲಚೇತನರಿಗೆ ದೈನಂದಿನ ಚಟುವಟಿಕೆಗಳಿಗೆ ಪೂರಕವಾದ ಸಾಧನ ಸಲಕರಣೆಯನ್ನು ವಿತರಿಸಲು ಜೂನ್ ೧೩ರಿಂದ ೨೩ರವರೆಗೆ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಜೂ.೧೩ರಂದು ಕಾಪುನ ಜೆ.ಸಿ ಭವನ, ಜೂ. ೧೪ರಂದು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ, ಜೂ.೧೫ರಂದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ, ಜೂ. ೧೬ರಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರ, ಜೂ.೧೭ರಂದು ಕುಂದಾಪುರದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಜೂ.೧೮ರಂದು ವಂಡ್ಸೆ ಸಮುದಾಯ ಆರೋಗ್ಯ ಕೇಂದ್ರ, ಜೂ.೨೦ರಂದು ನಾವುಂದ ಹಿರಿಯ ಪ್ರಾಥಮಿಕ ಶಾಲೆ, ಜೂ.೨೧ರಂದು ಹಾಲಾಡಿ ಕಿರಿಯ ಪ್ರಾಥಮಿಕ ಶಾಲೆ, ಜೂ. ೨೨ರಂದು ಕಾರ್ಕಳ ತಾಲೂಕು ಆಸ್ಪತ್ರೆ ಮತ್ತು ಜೂ.೨೩ರಂದು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣಾ ಶಿಬಿರವನ್ನು ಆಯೋಜಿ ಸಲಾಗಿದೆ.
ಶಿಬಿರದಲ್ಲಿ ಭಾಗವಹಿಸುವ ವಿಕಲಚೇತನ ವ್ಯಕ್ತಿಗಳು ಕನಿಷ್ಟ ಶೇ.೪೦ರಷ್ಟು ಅಂಗವೈಕಲ್ಯತೆ ಹೊಂದಿರುವ ವೈದ್ಯಕೀಯ ದೃಢಪತ್ರ, ಮಾಸಿಕ ಆದಾಯ ರೂ. ೨೨೫೦೦ಕ್ಕಿಂತ ಕಡಿಮೆ ಇರುವ ಬಗ್ಗೆ ದೃಢಪತ್ರ ಅಥವಾ ಬಿಪಿಎಲ್ ಕಾರ್ಡ್, ವಿಳಾಸ ದೃಢಪತ್ರ, ೨ ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಕಡ್ಡಾಯವಾಗಿ ತರಬೇಕು.
ವಿಕಲಚೇತನರಿಗೆ ಉಚಿತವಾಗಿ ಶ್ರವಣ ಸಾಧನ, ಕೃತಕ ಅವಯವ, ಕ್ಯಾಲಿಪರ್, ಮೊಣಕೈ ಊರುಗೋಲು, ಕಂಕುಳ ದೊಣ್ಣೆ, ರೊಲೇಟರ್, ಊರುಗೋಲು, ಗಾಲಿಕುರ್ಚಿ, ಸಿಪಿ ಗಾಲಿಕುರ್ಚಿ, ತ್ರಿಚಕ್ರ ಸೈಕಲ್, ಬ್ರೈಲ್ ಕಿಟ್, ಅಂಧರಿಗೆ ಮೊಬೈಲ್ ಫೋನ್, ಸ್ಮಾರ್ಟ್‌ಕೇನ್, ಕುಷ್ಟರೋಗದಿಂದ ಗುಣಮುಖರಾದವರಿಗೆ ಎಡಿಎಲ್ ಕಿಟ್ ಮತ್ತು ಮೊಬೈಲ್ ಫೋನ್ ವಿತರಿಸಲಾಗುವುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ದೂರವಾಣಿ ಸಂಖ್ಯೆ: ೦೮೨೦-೨೫೭೪೮೧೦/೮೧೧ನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







