ಬ್ಯಾಂಕ್‌ಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದಾಗ ದೇಶದ ಆರ್ಥಿಕತೆಯಲ್ಲಿ ಬದಲಾವಣೆ: ಡಿಸಿ ಡಾ.ರಾಜೇಂದ್ರ
ದ.ಕ.ಜಿಲ್ಲಾ ಮಟ್ಟದ ಸಾಲ ಸಂಪರ್ಕ ಕಾರ್ಯಕ್ರಮ

ಮಂಗಳೂರು : ಕರಾವಳಿಯು ಬ್ಯಾಂಕಿಂಗ್ ಕ್ಷೇತ್ರದ ತವರೂರು. ಇಡೀ ದೇಶಕ್ಕೆ ಬ್ಯಾಂಕಿಂಗ್ ಕೊಡುಗೆ ನೀಡಿದ ಹೆಗ್ಗಳಿಕೆಯು ಕರಾವಳಿ ಜಿಲ್ಲೆಗಳಿಗಿದೆ. ಹಾಗಾಗಿ ಕರಾವಳಿಯ ಬ್ಯಾಂಕ್‌ಗಳು ರಾಜ್ಯಕ್ಕೆ ದಿಕ್ಸೂಚಿಯಾಗು ವಂತೆ ಕಾರ್ಯನಿರ್ವಹಿಸಬೇಕು. ಅಲ್ಲದೆ ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವಲ್ಲಿ ಬ್ಯಾಂಕ್‌ಗಳ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದಾಗ ದೇಶದ ಆರ್ಥಿಕತೆಯಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.
ದ.ಕ.ಜಿಲ್ಲೆಯ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್‌ಗಳು, ನಬಾರ್ಡ್ ಮತ್ತು ಇತರ ಸರಕಾರಿ ಇಲಾಖೆಗಳ ಆಶ್ರಯದಲ್ಲಿ ನಗರದ ಉರ್ವಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ದ.ಕ. ಜಿಲ್ಲಾ ಮಟ್ಟದ ಸಾಲ ಸಂಪರ್ಕ ಕಾರ್ಯಕ್ರಮ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸಹಯೋಗದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ದ.ಕ.ಜಿಲ್ಲೆಯ ಬ್ಯಾಂಕ್‌ಗಳು ಮುಂಚೂಣಿಯಲ್ಲಿವೆ. ಇಲ್ಲಿ ಉದ್ಯಮ ಸ್ಥಾಪನೆಗೆ ಸಾಕಷ್ಟು ಅವಕಾಶವಿದ್ದು, ಜಿಲ್ಲಾಡಳಿತ ತನ್ನೆಲ್ಲ ಸಹಕಾರವನ್ನು ನೀಡುತ್ತದೆ. ಆದರೆ ಉದ್ಯಮಿಗಳಿಗೆ ಸಕಾಲದಲ್ಲಿ ಸಾಲ ಸೌಲಭ್ಯ ನೀಡುವಲ್ಲಿ ಬ್ಯಾಂಕ್‌ಗಳು ಮುತುವರ್ಜಿ ವಹಿಸಬೇಕು. ಸಾಲ ಕೊಡುವುದಷ್ಟೆ ಅಲ್ಲ, ಸಾಲ ಮರುಪಾವತಿವರೆಗೆ ಸಾಲ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದೂ ಕೂಡ ಬ್ಯಾಂಕ್‌ಗಳ ಕರ್ತವ್ಯವಾಗಿದೆ. ಕೋವಿಡ್ ಬಳಿಕ ಬ್ಯಾಂಕ್‌ಗಳ ಜವಾಬ್ದಾರಿ ಹೆಚ್ಚಿದೆ. ಸಾಲಗಾರ ಅಲ್ಲದವರಿಗೆ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕ ಚಟುವಟಿಕೆಯಲ್ಲಿ ಸಕ್ರಿಯಗೊಳಿಸಲು ಬ್ಯಾಂಕ್‌ಗಳು ಪ್ರೇರೇಪಿಸಬೇಕು ಎಂದು ಡಿಸಿ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿ.ಪಂ.ಸಿಇಒ ಡಾ.ಕುಮಾರ್ ಮಾತನಾಡಿ ದ.ಕ.ಜಿಲ್ಲೆಯಲ್ಲಿ ೬೦೦ ಬ್ಯಾಂಕ್ ಶಾಖೆಗಳಿದ್ದು, ೧,೨೦೦ ಫಲಾನುಭವಿಗಳ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಕಡಿಮೆ ಸಂಖ್ಯೆಯ ಫಲಾನುಭವಿಗಳು ಹಾಜರಾಗಿದ್ದಾರೆ. ಫಲಾನುಭವಿಗಳ ಆಯ್ಕೆ, ಅವರನ್ನು ತಲುಪುವ ಕಾರ್ಯಕ್ರಮಗಳು ಕ್ರಮಬದ್ಧವಾಗಿ ನಡೆಯಬೇಕು. ಕೃಷಿ, ಕೈಗಾರಿಕೆ ಸಹಿತ ಆದ್ಯತಾ ವಲಯಕ್ಕೆ ಹೆಚ್ಚಿನ ಸಾಲ ನೀಡಿಕೆಗೆ ಒತ್ತು ನೀಡಬೇಕು ಎಂದರು.
ಪ್ರಧಾನಮಂತ್ರಿ ಉದ್ಯೋಗ ನಿರ್ಮಾಣ ಯೋಜನೆ (ಪಿಎಂಇಜಿಪಿ)ಯಲ್ಲಿ ದ.ಕ.ಜಿಲ್ಲೆಯು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆದುಕೊಂಡಿದೆ. ೪೧೬ ಫಲಾನುಭವಿಗಳಿಗೆ ೧೯ ಸಾವಿರ ಕೋ.ರೂ. ಸಾಲ ಮಂಜೂರು ಆಗಿದೆ. ಸಾಲ ನೀಡಿಕೆಯಂತೆ ಸಾಲ ವಸೂಲಾತಿಯೂ ಮುಖ್ಯ. ಜಿಲ್ಲೆಯಲ್ಲಿ ೫೭ ಸಾವಿರ ಕೋ.ರೂ. ಹೊರಬಾಕಿ ಸಾಲ ಇದೆ. ಮುದ್ರಾ, ಜನಧನ್ ಯೋಜನೆಯಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಲಾಗಿದೆ ಎಂದು ಡಾ. ಕುಮಾರ್ ಹೇಳಿದರು.
ವಿಮಾ ಯೋಜನೆಯಲ್ಲಿ ದ.ಕ.ಜಿಲ್ಲೆ ರಾಜ್ಯಕ್ಕೆ ೫ನೇ ಸ್ಥಾನದಲ್ಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಮೀನುಗಾರಿಕೆಗೆ ಕೂಡ ಆದ್ಯತೆ ನೀಡಲಾಗುತ್ತಿದೆ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಗಮನಾರ್ಹ ಸಾಧನೆ ಮಾಡಬೇಕು ಎಂದು ಡಾ. ಕುಮಾರ್ ಸಲಹೆ ನೀಡಿದರು. ಈ ಸಂದರ್ಭ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಅಲ್ಲದೆ ಸಾಧಕ ಬ್ಯಾಂಕ್‌ಗಳ ಪ್ರಮುಖರನ್ನು ಗೌರವಿಸಲಾಯಿತು.
ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ವೆಂಕಟೇಶ್, ಕೆನರಾ ಬ್ಯಾಂಕ್ ಡಿಜಿಎಂ ರಾಘವ ನಾಯ್ಕ, ಭಾರತೀಯ ಸ್ಟೇಟ್‌ಬ್ಯಾಂಕ್‌ನ ಉಪ ಮಹಾಪ್ರಬಂಧಕ ರಾಜೇಶ್ ಗುಪ್ತಾ, ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ವಿನಯ ಭಟ್, ಕೆವಿಜಿವಿ ಪ್ರಾದೇಶಿಕ ವ್ಯವಸ್ಥಾಪಕ ಸೂರ್ಯನಾರಾಯಣ, ಐಒಬಿ ಪ್ರಾದೇಶಿಕ ವ್ಯವಸ್ಥಾಪಕ ಅಮಿತ್ ಕುಮಾರ್, ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಪ್ರವೀಣ್ ಎಂ.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕ್‌ಗಳು ಗ್ರಾಹಕ ಸ್ನೇಹಿಯಾಗಬೇಕು. ಕನ್ನಡ ಭಾಷೆಯನ್ನು ಕಲಿಯುವುದರ ಜೊತೆಗೆ ಸ್ಥಳೀಯ ಭಾಷೆಗಳ ಪರಿಚಯವೂ ಅಧಿಕಾರಿ/ಸಿಬ್ಬಂದಿಗೆ ಇರಬೇಕು. ಸ್ಥಳೀಯ ಸಂಸ್ಕೃತಿ, ಸ್ಥಳಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಿ ಬಾಂಧವ್ಯ ಬೆಳಸಬೇಕು. ಈ ಬಗ್ಗೆ ಶಾಖಾ ಹಂತದಲ್ಲಿ ಮೇಲಾಧಿಕಾರಿಗಳು ತಿಳಿವಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಸಲಹೆ ನೀಡಿದರು.
ಬ್ಯಾಂಕ್‌ಗೆ ಆಗಮಿಸುವ ಗ್ರಾಹಕರನ್ನು ಯಾವುದೇ ಕಾರಣಕ್ಕೂ ಸತಾಯಿಸಬಾರದು. ಅವರ ಕೆಲಸವನ್ನು ಕ್ರಮಬದ್ಧವಾಗಿ ಮಾಡಿಕೊಡಬೇಕು. ಗಾಹಕರನ್ನು ಸೆಳೆಯುವಲ್ಲಿ ಬ್ಯಾಂಕ್‌ಗಳು ಚುರುಕುತನ ತೋರಿಸಬೇಕು. ಗ್ರಾಹಕರು ಬ್ಯಾಂಕ್‌ಗೆ ತೆರಳಲು ಹಿಂಜರಿಕೆ ಪಡುವಂತೆ ಆಗಬಾರದು. ಬ್ಯಾಂಕ್‌ಗಳಲ್ಲಿ ಸೌಹಾರ್ದ ವಾತಾವರಣ ಇರಬೇಕಾಗಿದ್ದು, ಆಗ ಮಾತ್ರ ಬ್ಯಾಂಕ್ ಕೂಡ ಸದೃಢವಾಗಿ ಬೆಳೆಯಲು ಸಾಧ್ಯವಿದೆ ಎಂದು ಜಿಪಂ ಸಿಇಒ ಡಾ.ಕುಮಾರ್ ಹೇಳಿದರು.