ಕೃಷಿಕರ ಅಭಿವೃದ್ಧಿಯಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರವೂ ಇದೆ : ಟಿ.ಜಿ ರಾಜಾರಾಂ ಭಟ್
ಕೊಣಾಜೆ: ಜಿಲ್ಲೆಯ ಅಡಕೆ ಬೆಳೆಗಾರರು ಅಪಾಯದಲ್ಲಿದ್ದಾರೆ. ಬೆಲೆ ಏರಿಕೆಯಾದಂತೆ ಬೆಳೆಗಾರರ ಸಂಖ್ಯೆಯೂ ವಿಸ್ತಾರವಾಗುತ್ತಿದೆ. ಹಳದಿ ರೋಗವೂ ವ್ಯಾಪಕವಾಗಿದೆ. ಪರಿಹಾರ ಕಂಡುಕೊಳ್ಳಬೇಕಾದ ಸರಕಾರಿ ಸಂಸ್ಥೆಗಳಿಗೆ ಇನ್ನೂ ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ನಿಟ್ಟೆ ವಿ.ವಿ ರೈತರ ಜತೆಗೆ ನಡೆಸುವ ಸಂವಾದ ಹಾಗೂ ಸಮಸ್ಯೆಗಳಿಗೆ ಸಂಶೋಧನಾ ಕೇಂದ್ರಗಳಿಂದ ಪರಿಹಾರಕ್ಕೆ ಸಲಹೆ ದೊರಕಿಸುವ ಕಾರ್ಯ ಶ್ಲಾಘನೀಯ ಎಂದು ಮುಡಿಪು ಕುರ್ನಾಡು ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ.ಜಿ ರಾಜಾರಾಂ ಭಟ್ ಹೇಳಿದರು.
ದೇರಳಕಟ್ಟೆ ಸ್ವಾಯುತ್ತೆಗೊಳ್ಳಲಿರುವ ನಿಟ್ಟೆ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೈನ್ಸ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್, ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಮತ್ತು ಸರ್ವಂ ಲೈಫ್ ಸಹಯೋಗದೊಂದಿಗೆ ದೇರಳಕಟ್ಟೆ ಪನೀರು ಕ್ಯಾಂಪಸ್ ನಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಪರಿಸರ ದಿನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಣೆ ಅನ್ನುವುದು ಹಲವು ವರ್ಷಗಳ ಹಿಂದೆ ಅಪ್ಪಿಕೋ ಚಳವಳಿ ಮೂಲಕ ಸಾಂಕೇತಿಕವಾಗಿ ಆರಂಭವಾಯಿತು. ಮುಂದುವರಿದು ಚಳುವಳಿಯನ್ನು ಶಾಲೆಗಳಲ್ಲಿ ಆಚರಿಸುವಂತೆ ಸರಕಾರ ಆದೇಶಿಸಿತು. ಇದೀಗ ಪರಿಸರವನ್ನು ಸಂರಕ್ಷಿಸುವ ಉದ್ದೇಶದಿಂದ ಉನ್ನತ ಶಿಕ್ಷಣ ಸಂಸ್ಥೆಗಳು ಅದನ್ನು ಆಚರಿಸಿಕೊಂಡು ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಿರುವುದು ಉತ್ತಮ ಬೆಳವಣಿಗೆ. ವಿಶ್ವವಿದ್ಯಾನಿಲಯಗಳು ಹಳ್ಳಿಯ ಜನ ಬಾಂಧವ್ಯ ಹೊಂದಿದಲ್ಲಿ ಕೃಷಿಕರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುವುದು. ಕೃಷಿಕರ ಪಾಲಿಗೆ ಇದೊಂದು ಸುವರ್ಣ ಯುಗ, ಕೃಷಿಕರ ಭಾಗದ ಸಮಸ್ಯೆ ಆಲಿಸಲು ಸಂಸ್ಥೆ ಇದೆ ಅನ್ನುವುದು ಸಂತಸದ ವಿಚಾರ. ಈ ಮೂಲಕ ಪರಿಸರ ಉಳಿಸುವ ಕಾರ್ಯ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಯೂ ಅಪಾಯದಲ್ಲಿದೆ, ಅಡಿಕೆಗೆ ಬರುವ ರೋಗವೂ ಹೆಚ್ಚಿನ ಪ್ರಮಾಣದಲ್ಲಿದೆ. ರೋಗ ಬಂದಾಗ ಕೇಳುವವರು ಇಲ್ಲ. ಸರಕಾರದ ಕ್ರಮಕೈಗೊಳ್ಳುವ ಸಂಸ್ಥೆಗಳು ಇನ್ನೂ ರೋಗವನ್ನು ಹತ್ತಿಕ್ಕುವಲ್ಲಿ ತುದಿಮುಟ್ಟಲಿಲ್ಲ. ಅಡಿಕೆಗೆ ಬೆಲೆ ಏರಿಕೆಯೂ ಅಪಾಯವನ್ನು ಆಹ್ವಾನಿಸುವಂತಿದೆ. ತಮಿಳುನಾಡಿನಲ್ಲೂ ಅಡಿಕೆ ಬೆಳೆಸುವ ಯೋಜನೆ ರೂಪಿಸಿರುವುದು ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಆತಂಕ ತರುವ ವಿಚಾರ. ಕ್ಯಾಂಪ್ಕೋ ಸಾಧನೆಯಿಂದ 1973 ರಲ್ಲಿ ಕೆ.ಜಿ ಬೆಲೆ 3 ರೂ. ಇದ್ದಂತಹ ಅಡಿಕೆ ಇದೀಗ 500 ರೂ. ಬೆಲೆಯನ್ನು ತಲುಪಿದೆ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ನಿಟ್ಟೆ ವಿ.ವಿ ಸಂಶೋಧನಾ ಕೇಂದ್ರ ಕೈಗಾರಿಕೆಗಳ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಹಳ್ಳಿಗಳನ್ನು ವಿ.ವಿ ಬಾಂಧವ್ಯಕ್ಕೆ ಒಳಪಡಿಸುವ ಕಾರ್ಯದ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ಕೆ ನಿಟ್ಟೆ ಮುಂದಾಗುತ್ತಿದೆ.
ಜೀವನಕ್ರಮಗಳ ಮೂಲಕ ಅನಾರೋಗ್ಯದ ಕಾಯಿಲೆಗಳು ಹೆಚ್ಚುತ್ತಿವೆ. ಇವೆಲ್ಲದಕ್ಕೆ ಪರಿಸರ ಪೂರಕ ಚಟುವಟಿಕೆಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಿದೆ. ಅತಿಯಾಸೆ ಜಾಸ್ತಿಯಾಗಿರುವುದರಿಂದ ಪರಿಸರ ಅಸಮತೋಲನ ಕಾಡುತ್ತಿದೆ. ಅಗತ್ಯತೆ ಗಳನ್ನು ಕಡಿಮೆ ಮಾಡೋಣ ಪ್ರಕೃತಿಗೆ ತ್ಯಾಗ ಮಾಡೋಣ, ಇಂತಹ ಮನಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ನಿಟ್ಟೆ ಶ್ರಮಿಸುತ್ತಿದೆ ಎಂದರು.
ವಿಜ್ಞಾನಿ , ಕೃಷಿಕರು, ಚೌಟರ ಸಂಸ್ಕೃತಿ ವೇದಿಕೆಯ ಡಾ.ಚಂದ್ರಶೇಖರ್ ಚೌಟ, ಕ್ಯಾಂಪ್ಕೋ ನಿರ್ದೇಶಕ ಎಂ. ಮಹೇಶ್ ಚೌಟ, ಕಾಸರಗೋಡು ಸಿಪಿಸಿಆರ್ ಐ ನ ಸಸ್ಯ ಶರೀರಶಾಸ್ತ್ರ ಮುಖ್ಯಸ್ಥ ಡಾ.ಕೆ.ಬಿ ಹೆಬ್ಬಾರ್ ಮುಖ್ಯ ಅತಿಥಿಗಳಾಗಿದ್ದರು.
ಸರ್ವಂ ಲೈಫ್ ತಂಡದ ದೀಪಕ್ ಬಸವರಾಜ್, ಫುಲ್ಮನಿ ಬಾರೋ, ನಾಗೇಂದ್ರ ಎಂ.ಚಂದರ್ ಹಾಗೂ ವಿಶಾಖ್ ಚಂದ್ರಮೌಳಿ ಸ್ಥಳೀಯ ರೈತರ ಜೊತೆಗೆ ಸಂವಾದವನ್ನು ಹಮ್ಮಿಕೊಂಡರು.
ನಿಟ್ಟೆ ವಿ.ವಿ ಐಐಸಿಯ ಅಧ್ಯಕ್ಷ ಡಾ. ಶ್ರೀನಿಕೇತನ್ ಸ್ವಾಗತಿಸಿದರು. ನುಕ್ಸರ್ ನಿರ್ದೇಶಕ ಡಾ. ಅನಿರ್ಬಾನ್ ಚಕ್ರವರ್ತಿ ಸ್ವಾಗತಿಸಿದರು. ಡಾ. ಸ್ಮಿತಾ ಹೆಗ್ಡೆ ವಂದಿಸಿದರು.
ಪರಿಸರ ಉಳಿಸಿ ಜಾಗೃತಿ ಜಾಥಾ ದೇರಳಕಟ್ಟೆಯ ಪಾನೀರು ಕ್ಯಾಂಪಸ್ಸಿನಿಂದ ಸಭಾಂಗಣದವೆರೆಗೆ ವಿದ್ಯಾರ್ಥಿಗಳು ಹಮ್ಮಿಕೊಂಡರು.







