ಮೈಸೂರು; ಕಾನ್ವೆಂಟ್‍ನಲ್ಲಿ ವಾಸ ಮಾಡುತ್ತಿದ್ದ ಕ್ರೈಸ್ತ ಸನ್ಯಾಸಿನಿಗೆ ಸಂಸ್ಥೆಯಿಂದಲೇ ಕೊಲೆ ಬೆದರಿಕೆ: ಪ್ರಕರಣ ದಾಖಲು

ಮೈಸೂರು,ಜೂ.8: ನಗರದ ಮೈಸೂರು-ಮಾನಂದವಾಡಿ ರಸ್ತೆಯ ಕಾನ್ವೆಂಟ್ ಒಂದರಲ್ಲಿ ವಾಸ ಮಾಡುತ್ತಿರುವ ಕ್ರೈಸ್ತ ಸನ್ಯಾಸಿನಿಯೊಬ್ಬರು ಅಲ್ಲಿನ ಆಡಳಿತ ಮಂಡಳಿಯಿಂದ ನನಗೆ ಕೊಲೆ ಬೆದರಿಕೆ ಇದೆ. ನನ್ನ ಮೇಲೆ ಹಲ್ಲೆ ಮಾಡಿ ಹಿಂಸೆ ನೀಡಲಾಗುತ್ತಿದೆ ಎಂಬ ಆರೋಪ ಮಾಡಿದ್ದು, ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರ್ಸಿ ಕಾನ್ವೆಂಟ್‍ನ ಸುಧಾ ಎಂಬಿ ಎಲ್ಸೀನಾ ಎಂಬ ಕ್ರೈಸ್ತ ಸನ್ಯಾಸಿನಿ ತನ್ನ ಹೇಳಿಕೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 'ಈ ಸಂಸ್ಥೆಯಲ್ಲಿ ನಡೆಯುತ್ತಿರುವ ಅನೇಕ ಅನೀತಿ, ಅಕ್ರಮ, ಲೈಂಗಿಕ ಹಿಂಸೆ, ಎರಡು ಕೊಲೆಯನ್ನು ನಾನು ನೋಡಿದ್ದೆ. ಇದನ್ನು ಹೊರಗಡೆಯವರಗೆ ಹೇಳಿದ್ದೇನೆ ಎಂದು ತಿಳಿಸಿದ್ದೆ. ಇದರಿಂದ ನನ್ನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುವ ಬೆದರಿಕೆ ನೀಡಿದ್ದಾರೆ. ಇದರಿಂದ ನನ್ನನ್ನೂ ಕೊಲೆ ಮಾಡಬಹುದು. ಹಾಗಾಗಿ ನನ್ನ ಜೀವನದ ಮೇಲೆ ನಡೆಯುವ ಯಾವುದೇ ಸಾವಿಗೆ ಈ ಸಂಸ್ಥೆ ಕಾರಣವಾಗಲಿದೆ. ನಾನು ಯಾವುದೇ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ನಾನೇನಾದರೂ ಸಾವಿಗೀಡಾದರೆ ಅದಕ್ಕೆ ಈ ಸಂಸ್ಥೆಯವರೇ ಕಾರಣರಾಗುತ್ತಾರೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು' ಎಂದು ಮನವಿ ಮಾಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ವ್ಯಾಪ್ತಿಗೆ ಬರುವ ಅಶೋಕಪುರಂ ಪೊಲಿಸರು ಆಕೆಯಿಂದ ಹೇಳಿಕೆ ಪಡೆದು ಮೂವರು ಮತ್ತು ಈ ಸಂಸ್ಥೆಯ ಡ್ರೈವರ್‍ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು. ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ಸಿಸ್ಟರ್ ಅವರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಹೇಳಿಕೆಯನ್ವಯ ಮರ್ಸಿ ಕಾನ್ವೆಂಟ್‍ನವರನ್ನು ವಿಚಾರಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







