ಹಜ್ ಭವನದಲ್ಲಿ ಆಡಿಟೋರಿಯಂ ನಿರ್ಮಾಣಕ್ಕೆ ನೆರವು: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಜೂ.8: ರಾಜ್ಯದಿಂದ ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಿಗಳು ರಾಜ್ಯ ಹಾಗೂ ದೇಶದ ಅಭಿವೃದ್ಧಿ ಜೊತೆಗೆ, ಶಾಂತಿ, ಸುವ್ಯವಸ್ಥೆ, ಭ್ರಾತೃತ್ವ, ಸಹೋದರತೆ ನೆಲೆಸುವಂತೆ ಪ್ರಾರ್ಥನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋರಿದರು.
ಬುಧವಾರ ಹೆಗಡೆ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ರಾಜ್ಯ ಹಜ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹಜ್ ಯಾತ್ರಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಜ್ ಯಾತ್ರೆಗೆ ಹೋಗುವವರು ಅದೃಷ್ಟವಂತರು. ಹಜ್ ಯಾತ್ರೆಯಿಂದ ಹಿಂದಿರುಗಿದ ಬಳಿಕ ಉತ್ತಮ ಹಾಗೂ ಮಾದರಿ ಜೀವನ ನಿರ್ವಹಣೆ ಮಾಡಬೇಕು ಎಂದು ಅವರು ಹೇಳಿದರು.
ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿ ಆಗಿದ್ದಾಗ 40 ಕೋಟಿ ರೂ.ಗಳನ್ನು ಒದಗಿಸಿ ಇಡೀ ದೇಶದಲ್ಲೇ ಮಾದರಿ ಹಜ್ ಭವನ ನಿರ್ಮಾಣ ಮಾಡಿಸಿದರು. ಈ ಹಜ್ ಭವನದಲ್ಲಿ ಆಡಿಟೋರಿಯಂ ನಿರ್ಮಾಣ ಮಾಡಲು ಅಗತ್ಯ ನೆರವು ನೀಡಲಾಗುವುದು. ಭಾರತೀಯ ಹಜ್ ಸಮಿತಿಯೂ ಈ ಕಾರ್ಯಕ್ಕೆ ಕೈ ಜೋಡಿಸಲಿ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಮಾತನಾಡಿ, ಸೌದಿ ಅರೇಬಿಯಾ ಸರಕಾರವು ಈ ಬಾರಿ ಕೇವಲ ಶೇ.40 ರಷ್ಟು ಮಂದಿಗೆ ಹಜ್ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಅದರಲ್ಲಿ ಯಾತ್ರೆಗೆ ಹೋಗಲು ಆಯ್ಕೆಯಾಗಿರುವ ನೀವು ಅದೃಷ್ಟವಂತರು ಎಂದರು.
ಮಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಗುಲ್ಬರ್ಗದಲ್ಲಿಯೂ ಹಜ್ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಭವನಗಳು ಹಜ್ ಯಾತ್ರೆಯ ಸಂದರ್ಭ ಹೊರತುಪಡಿಸಿ ವರ್ಷದ ಎಲ್ಲ ದಿನಗಳಲ್ಲೂ ಸಮುದಾಯದ ಇತರ ಕಲ್ಯಾಣ ಚಟುವಟಿಕೆಗಳಿಗೆ ಬಳಕೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಭಾರತೀಯ ಹಜ್ ಸಮಿತಿಯು ನಮ್ಮ ದೇಶದ ಹಜ್ ಯಾತ್ರಿಗಳಿಗೆ ಪವಿತ್ರ ಮಕ್ಕಾ ಹಾಗೂ ಮದೀನಾ ನಗರಗಳಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಿದೆ. ಜೊತೆಗೆ, ಈ ಹಜ್ ಭವನದಲ್ಲಿ ಬಾಕಿ ಇರುವ ಕೆಲಸಗಳಿಗಾಗಿ ಅಗತ್ಯ ನೆರವು ಒದಗಿಸಲಾಗುವುದು ಎಂದು ಭಾರತೀಯ ಹಜ್ ಸಮಿತಿಯ ಅಧ್ಯಕ್ಷ ಎ.ಪಿ.ಅಬ್ದುಲ್ಲಾ ಕುಟ್ಟಿ ಹೇಳಿದರು.
ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಮಾತನಾಡಿ, ಪ್ರತಿ ವರ್ಷ ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರಿಗಳು ಪ್ರಯಾಣ ಬೆಳೆಸುತ್ತಿದ್ದರು. ಆದರೆ, ಈ ವರ್ಷ ಕೇವಲ ಬೆಂಗಳೂರು ವಿಮಾನ ನಿಲ್ದಾಣದಿಂದ ಮಾತ್ರ ಹೋಗಲು ಅವಕಾಶ ನೀಡಲಾಗಿದೆ ಎಂದರು.
ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಸ್ಥಳದ ಅಭಾವದಿಂದ ಇನ್ನೂ ಕಾರ್ಯಗತವಾಗಿಲ್ಲ. ಮುಂದಿನ ವರ್ಷ ಮಂಗಳೂರು ವಿಮಾನ ನಿಲ್ದಾಣದಿಂದಲೂ ಯಾತ್ರಿಗಳು ಹೋಗುವಂತಾಗಲಿ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೃಷ್ಣ ಬೈರೇಗೌಡ ಮಾತನಾಡಿ, ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಾಗದೆ ದಿನೇ ದಿನೇ ಅಶಾಂತಿ ಹೆಚ್ಚಾಗುವಂತಾಗಿದೆ. ಅಣ್ಣ, ತಮ್ಮಂದಿರಂತೆ ಇದ್ದ ನಮ್ಮ ನಡುವೆ ಕೆಲವರು ಅಪನಂಬಿಕೆ ಮೂಡುವಂತೆ ಮಾಡುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಅವುಗಳ ಬಗ್ಗೆ ಯಾವುದೇ ಚರ್ಚೆಗಳು ಆಗುತ್ತಿಲ್ಲ. ಅಶಾಂತಿ ಮೂಡಿಸುತ್ತಿರುವವರಿಗೂ ಒಳ್ಳೆಯ ಬುದ್ದಿ ಕೊಡುವಂತೆ ಹಜ್ ಯಾತ್ರಿಗಳು ಪ್ರಾರ್ಥನೆ ಮಾಡಲಿ ಎಂದು ಅವರು ಕೋರಿದರು.
ಸಮಾರಂಭದಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ, ಮೌಲಾನ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನ ಮಕ್ಸೂದ್ ಇಮ್ರಾನ್, ಮಾಜಿ ಸಚಿವ ಆರ್.ರೋಶನ್ ಬೇಗ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ಶಾಸಕರಾದ ರಹೀಮ್ ಖಾನ್, ಕನೀಝ್ ಫಾತಿಮಾ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಎಂ.ಶಾಫಿ ಸ ಅದಿ, ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.








