ಪತ್ನಿ ಉದ್ಯೋಗಕ್ಕೆ ತೆರಳದಿರಲು ಬಲಗೈ ಕತ್ತರಿಸಿದ ಪತಿ: ಒಂಟಿ ಕೈಯಿಂದಲೇ ಬದುಕು ಬರೆಯಲು ಸಜ್ಜಾಗುತ್ತಿರುವ ರೇನು ಖಾತೂನ್

ಕೋಲ್ಕತಾ,ಜೂ.8: ಪೂರ್ವ ಬರ್ದ್ವಾನ್ ಜಿಲ್ಲೆಯ ಕೇತುಗ್ರಾಮದಲ್ಲಿ ರವಿವಾರ ಬೆಳಿಗ್ಗೆ ಘೋರ ಘಟನೆಯೊಂದು ಸಂಭವಿಸಿತ್ತು. ಶರೀಫುಲ್ ಶೇಖ್ ಅಲಿಯಾಸ್ ಶೇರ್ ಮುಹಮ್ಮದ್ ಎಂಬಾತ ತನ್ನ ಪತ್ನಿ ರೇನು ಖಾತೂನ್(23) ಸರಕಾರಿ ಆಸ್ಪತ್ರೆಯಲ್ಲಿ ನರ್ಸ್ ಉದ್ಯೋಗಕ್ಕೆ ಸೇರುವುದನ್ನು ತಡೆಯಲು ಆಕೆಯ ಬಲಅಂಗೈಯನ್ನು ಮಣಿಗಂಟಿನಿಂದ ತುಂಡರಿಸಿದ್ದ.
‘ನನ್ನ ಗಂಡ ನಾನು ಕೆಲಸ ಮಾಡುವುದನ್ನು ತಡೆಯಲು ನನ್ನ ಕೈಯನ್ನು ತುಂಡರಿಸಿದ್ದಾನೆ. ಆದರೆ ನಾನು ಕೆಲಸ ಮಾಡುತ್ತೇನೆ ಮತ್ತು ಅವನನ್ನು ತಪ್ಪು ಎಂದು ಸಾಬೀತು ಮಾಡುತ್ತೇನೆ ’ಎಂದು ದುರ್ಗಾಪುರದ ಐಕ್ಯೂ ಸಿಟಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಾತುನ್ ದೃಢವಾಗಿ ಹೇಳಿದರು.
ಖಾತೂನ್ ತನ್ನ ಬಲ ಅಂಗೈಯನ್ನು ಕಳೆದುಕೊಂಡ 48 ಗಂಟೆಯೊಳಗೇ ಎಡಗೈಯಿಂದ ಬರೆಯುವುದನ್ನು ಅಭ್ಯಾಸ ಮಾಡಲಾರಂಭಿಸಿದ್ದಾರೆ. ಖಾತೂನ್ ಬಲ ಅಂಗೈ ಕಳೆದುಕೊಂಡಿದ್ದಾರೆ, ಆದರೆ ಭರವಸೆಯನ್ನು ಕಳೆದುಕೊಂಡಿಲ್ಲ.‘ನನ್ನ ಎಡಗೈಯಿಂದಲೇ ಮತ್ತೆ ನಾನು ಪುಟಿದೇಳುತ್ತೇನೆ ’ಎಂದರು. ಶರೀಫುಲ್ ಶೇಖ್ ನನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
‘ನನ್ನ ಜೀವವನ್ನು ಉಳಿಸಿದ್ದಕ್ಕಾಗಿ ವೈದ್ಯರಿಗೆ ನಾನು ಋಣಿಯಾಗಿದ್ದೇನೆ. ಈಗ ನಾನು ಬದುಕಲು ಮತ್ತು ನರ್ಸ್ ಆಗಿ ಕೆಲಸ ಮಾಡುವ ನನ್ನ ಕನಸನ್ನು ನನಸಾಗಿಸಿಕೊಳ್ಳಲು ಬಯಸಿದ್ದೇನೆ ’ಎಂದು ಆಸ್ಪತ್ರೆಯ ಹಾಸಿಗೆಯಲ್ಲಿ ಕುಳಿತು ಎಡಗೈಯಿಂದ ಕಾಗದದ ಮೇಲೆ ಬಂಗಾಳಿ ಮತ್ತು ಇಂಗ್ಲೀಷ್ ಅಕ್ಷರಗಳನ್ನು ಬರೆಯುತ್ತಿದ್ದ ಖಾತೂನ್ ಹೇಳಿದರು.
‘ನನ್ನ ಎಡಗೈಯಿಂದ ಶೀಘ್ರವೇ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು, ನಾನು ನನ್ನ ಉದ್ಯೋಗವನ್ನು ಉಳಿಸಿಕೊಳ್ಳುವಂತಾಗಲು ಏನಾದರೂ ಮಾಡುವಂತೆ ಅವರನ್ನು ಆಗ್ರಹಿಸುತ್ತೇನೆ ’ಎಂದರು.
ಮಂಗಳವಾರ ಬೆಳಿಗ್ಗೆ ಖಾತೂನ್ ಕಾಗದದ ತುಂಡು ಮತ್ತು ಪೆನ್ ನೀಡುವಂತೆ ಕೋರಿಕೊಂಡಾಗ ತಮಗೆ ಅಚ್ಚರಿಯಾಗಿತ್ತು. ತಾನು ಎಡಗೈಯಿಂದ ಬರೆಯುವುದನ್ನು ಅಭ್ಯಾಸ ಮಾಡುತ್ತೇನೆ ಎಂದು ಆಕೆ ಹೇಳಿದ್ದರು. ಇಂತಹ ದೃಢತೆ ಅಪರೂಪವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು,ವೈದ್ಯರು ಮತ್ತು ನರ್ಸ್ ಗಳು ಹೇಳಿದರು.
ತನ್ನೆದುರುಗಿರುವ ಸವಾಲುಗಳ ಬಗ್ಗೆ ತನಗೆ ಅರಿವಿದೆ ಮತ್ತು ಸರಕಾರಿ ಉದ್ಯೋಗಕ್ಕೆ ಅರ್ಹಳಾಗಿರುವುದು ಅವುಗಳಲ್ಲಿ ಅತ್ಯಂತ ಕಷ್ಟದ್ದಾಗಿದೆ ಎಂದು ಖಾತೂನ್ ಹೇಳಿದರು. ಅವರು ಈಗಾಗಲೇ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ‘ನನ್ನ ತಂದೆ ಖಾಸಗಿ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ನನ್ನ ಶಿಕ್ಷಣಕ್ಕಾಗಿ ತುಂಬ ಕಷ್ಟಪಟ್ಟಿದ್ದಾರೆ. ನನ್ನ ಗಂಡನ ಕ್ರೂರ ಕೃತ್ಯದಿಂದಾಗಿ ನಾನು ನನ್ನ ತಂದೆಯನ್ನು ನಿರಾಶೆಗೊಳಿಸಲಾರೆ ’ಎಂದು ಖಾತೂನ್ ಹೇಳಿದರು.
‘ಮುಂದಿನ ಕೆಲವು ವರ್ಷಗಳಲ್ಲಿ ನರ್ಸಿಂಗ್ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಮುಗಿಸಲು ನಾನು ಬಯಸಿದ್ದೇನೆ, ಹೀಗಾಗಿ ಜಿಎನ್ಎಂ (ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ) ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ನನ್ನ ಏಕೈಕ ಮಹತ್ವಾಕಾಂಕ್ಷೆಯಲ್ಲ. ಎಂಎಸ್ಸಿಯ ಬಳಿಕ ನರ್ಸಿಂಗ್ನಲ್ಲಿ ಸಂಶೋಧನೆ ಮಾಡಲು ನಾನು ಬಯಸಿದ್ದೇನೆ. ರೋಗಿಗಳ ಶುಶ್ರೂಷೆಯನ್ನು ಹೇಗೆ ಮಾಡಬೇಕು ಎಂದು ಹುಡುಗಿಯರಿಗೆ ಕಲಿಸಲು ನಾನು ಬಯಸಿದ್ದೇನೆ. ಹೀಗಾಗಿ ನನ್ನ ಮುಂದಿನ ಶಿಕ್ಷಣಕ್ಕಾಗಿ ಸ್ವಲ್ಪ ಹಣವನ್ನು ಗಳಿಸಲು ನನಗೆ ಉದ್ಯೋಗದ ಅಗತ್ಯವಿದೆ’ ಎಂದೂ ಖಾತೂನ್ ಹೇಳಿದರು.
ಸಾಮಾನ್ಯವಾಗಿ ಜಿಎನ್ಎಂ ಡಿಪ್ಲೋಮಾ ನರ್ಸ್ಗೆ ಕೆಲಸಕ್ಕೆ ಸೇರಿದಾಗ ಮಾಸಿಕ 26,000 ರೂ.ಸಂಬಳ ದೊರೆಯುತ್ತದೆ ಎಂದು ತಿಳಿಸಿದ ಹಿರಿಯ ನರ್ಸಿಂಗ್ ಅಧಿಕಾರಿ,ಖಾತುನ್ ಜಿಎನ್ಎಂ ಡಿಪ್ಲೋಮಾ ಪೂರ್ಣಗೊಳಿಸಿದ ಬಳಿಕ ಬಿಎಸ್ಸಿ ನರ್ಸಿಂಗ್ ಕೋರ್ಸ್ ಗೆ ಸೇರಬಹುದು. ಉನ್ನತ ಶಿಕ್ಷಣಕ್ಕೂ ಮಾರ್ಗ ಮುಕ್ತವಾಗಿದೆ ಎಂದರು. ಪ.ಬಂಗಾಳ ಮಹಿಳಾ ಆಯೋಗದ ಅಧ್ಯಕ್ಷೆ ಲೀನಾ ಗಂಗೋಪಾಧ್ಯಾಯ ಮತ್ತು ಸದಸ್ಯರು ಮಂಗಳವಾರ ಆಸ್ಪತ್ರೆಯಲ್ಲಿ ಖಾತೂನ್ ರನ್ನು ಭೇಟಿಯಾಗಿದ್ದರು.
‘ತಾನು ಆಯ್ಕೆಗೊಂಡಿರುವ ಉದ್ಯೋಗವನ್ನು ಉಳಿಸಿಕೊಳ್ಳಲು ನೆರವಾಗುವಂತೆ ಆಕೆ ಕೋರಿದ್ದಾರೆ. ಆದರೆ ತನ್ನ ಅಸಮರ್ಥತೆಯಿಂದಾಗಿ ಅವರು ನರ್ಸ್ ಕೆಲಸವನ್ನು ಮಾಡಬಹುದೇ ಎನ್ನುವುದು ನನಗೆ ತಿಳಿದಿಲ್ಲ. ಆದಾಗ್ಯೂ ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ’ ಎಂದು ಮುಖ್ಯೋಪಾಧ್ಯಾಯ ಹೇಳಿದರು.
ಕೈಯನ್ನು ತುಂಡರಿಸಿದ ತನ್ನ ಗಂಡನಿಗೆ ಮತ್ತು ಆತನಿಗೆ ನೆರವಾಗಿದ್ದ ಇಬ್ಬರು ಸ್ನೇಹಿತರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಹೇಳಿದರು. ತಾನು ನರ್ಸ್ ಆಗಿ ಕೆಲಸ ಮಾಡಲು ಬಯಸಿದ್ದೇನೆ ಎನ್ನುವುದು ಗೊತ್ತಾದಾಗ ತನ್ನ ಅತ್ತೆ-ಮಾವ ಕೂಡ ಕಿರುಕುಳ ನೀಡಿದ್ದರು. ಕಾನೂನು ಅವರನ್ನೂ ಬಿಡಬಾರದು ಎಂದರು. ಖಾತೂನ್ ರ ಮಾವ ಸಿರಾಜ್ ಶೇಖ್ ಮತ್ತು ಅತ್ತೆ ಮೆಹರ್ನಿಕಾ ಬೀವಿ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಟ್ವಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.







